

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ಭಾರಿ ಮಳೆ ಬಿದ್ದ ಹಿನ್ನೆಲೆ ವಿವಿಧೆಡೆ ಆರು ಮನೆಗಳು ಕುಸಿದಿವೆ.
ಇಂಡಿ ಬಳ್ಳೊಳ್ಳಿ ಗ್ರಾಮದಲ್ಲಿ ಮೂರು ಹಾಗೂ ಬಬಲೇಶ್ವರ ತಾಲೂಕಿನಲ್ಲಿ ಎರಡು, ವಿಜಯಪುರ ತಾಲೂಕಿನ ಮದಭಾವಿ ತಾಂಡಾದಲ್ಲಿ ಒಂದು ಮನೆ ಕುಸಿದಿದೆ. ಜಿಲ್ಲೆಯಲ್ಲಿ ಒಟ್ಟಾರೆ ೧೪.೮೪ ಮಿ.ಮೀ. ಮಳೆ ಆಗಿದೆ.
ಬಸವನ ಬಾಗೇವಾಡಿ ೨೯.೭, ಮನಗೂಳಿ ೨೮.೩, ಆಲಮಟ್ಟಿ ೧೨.೦, ಹೂವಿನ ಹಿಪ್ಪರಗಿ ೧೨.೮, ಅರೇಶಂಕರ ೯.೫, ಮಟ್ಟಿಹಾಳ ೧೩.೦, ವಿಜಯಪುರ ೩.೬, ನಾಗಠಾಣ ೧೦.೨, ಭೂತನಾಳ ೧೬.೨, ಹಿಟ್ನಳ್ಳಿ ೧೬.೮, ತಿಕೋಟಾ ೨೧.೮, ಮಮದಾಪುರ ೮.೮, ಕುಮಟಗಿ ೮.೬, ಕನ್ನೂರ ೮.೧, ಬಬಲೇಶ್ವರ ೩.೬, ಇಂಡಿ ೪೯.೮, ನಾದ ಬಿ.ಕೆ ೧.೪, ಅಗರಖೇಡ ೩೯.೨, ಹೋರ್ತಿ ೨೦.೪, ಹಲಸಂಗಿ ೮೪.೦, ಚಡಚಣ ೬.೦, ಝಳಕಿ ೩೭.೪, ಮುದ್ದೇಬಿಹಾಳ ೮.೪, ನಾಲತವಾಡ ೧೭.೩, ತಾಳಿಕೋಟೆ ೬.೪, ಢವಳಗಿ ೬.೦, ಆಲಮೇಲ ೩.೮, ರಾಮನಹಳ್ಳಿ ೮.೨, ಕಡ್ಲೇವಾಡ ೧೦.೦, ದೇವರಹಿಪ್ಪರಗಿ ೭.೦ ಮಿ.ಮೀ.ಮಳೆ ಆಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಜನಜೀವನ ಅಸ್ತವ್ಯಸ್ತ
ಬೆಳ್ಳಂಬೆಳಗ್ಗೆ ವರುಣನ ಆರ್ಭಟ ಹೆಚ್ಚಿದ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಮೇಲೆ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆ ಆಯಿತು. ಶಾಲೆ-ಕಾಲೇಜುಗಳಿಗೆ ಹಾಗೂ ಸರ್ಕಾರಿ ಕೆಲಸಕ್ಕೆ ಹೋಗುವವರು ಮಳೆಯಲ್ಲೆ ಛತ್ರಿ ಹಿಡಿದು ಹೋಗುವಂತಾಯಿತು. ವಿಜಯಪುರ ನಗರದ ಯೋಗಾಪುರ ಕಾಲನಿ ಸೇರಿದಂತೆ ವಿವಿಧೆಡೆ ಮನೆಗಳಲ್ಲಿ ನೀರು ನುಗ್ಗಿದ್ದು, ಅದರಿಂದ ಹಾನಿ ಆಗಿದೆ. ಸ್ಥಳಕ್ಕೆ ವಿಜಯಪುರ ತಹಸೀಲ್ದಾರ್ ಸಿದ್ದರಾಮಯ್ಯ ಭೋಸಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.