

ಹಳಿಯಾಳ: ಇಲ್ಲಿಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ಧೋರಣೆ ಹಾಗೂ ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಹೋರಾಟ ಸೋಮವಾರ ರಸ್ತಾ ರೊಖೋ ಪ್ರತಿಭಟನೆ ಮೂಲಕ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ.
ಪಟ್ಟಣದ ಶಿವಾಜಿ ವೃತ್ತದಲ್ಲಿ ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಮತ್ತು ಕಬ್ಬು ಬೆಳೆಗಾರರ ಸಂಘದವರು ಜಂಟಿಯಾಗಿ ರಸ್ತಾ ರೊಖೋ ಮೂಲಕ ಪ್ರತಿಭಟನೆಗೆ ಇಳಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುನೀಲ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಎಲ್. ಘೊಟ್ನೆಕರ ಅವರು ಬಿಜೆಪಿ ತಾಲೂಕು ಘಟಕದೊಂದಿಗೆ ಆಗಮಿಸಿ ಬೆಂಬಲ ಸೂಚಿಸಿದರು.
ಹಳಿಯಾಳ-ಯಲ್ಲಾಪುರ-ಬೆಳಗಾವಿ ರಾಜ್ಯ ಹೆದ್ದಾರಿಯನ್ನು ತಡೆದ ಪ್ರತಿಭಟನಾಕಾರರು 6 ಗಂಟೆಗೂ ಅಧಿಕ ಸಮಯ ಪ್ರತಿಭಟನೆ ನಡೆಸಿ ಕಾರ್ಖಾನೆ, ಶಾಸಕರು ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಸ್ಥಳೀಯ ಇಐಡಿ ಪ್ಯಾರಿ ಕಾರ್ಖಾನೆ ರೈತರಿಗೆ ಕಾಮಧೇನು ಆಗದೇ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ ಮಾತ್ರ ಕಾಮಧೇನುವಾಗಿದೆ ಎಂದು ಕಟುಕಿದರು.
ಕೆಲವು ತಿಂಗಳ ಹಿಂದೆಯಷ್ಟೇ ಕಾರ್ಖಾನೆಯವರನ್ನು ಕರೆದು ಸಭೆ ನಡೆಸಿ ರೈತರಿಗೆ ಬಾಕಿ ಹಣ 26 ಕೋಟಿ ರೂ. ಕೊಡಿ ಮತ್ತು ತೂಕ ಯಂತ್ರ ಹೊರಗೆ ಸ್ಥಾಪಿಸಿ ಎಂದು ಹೇಳಿದ ಶಾಸಕರು ನಂತರ ಈ ಬಗ್ಗೆ ಬಾಯಿ ಬಿಡದಿರುವುದು ಖೇದಕರ. ರೈತರು ತಮ್ಮ ಕಬ್ಬನ್ನು ಎಲ್ಲಿಗೆ ಬೇಕಾದರೂ ಸಾಗಿಸುತ್ತಾರೆ. ಅದು ಅವರ ಹಕ್ಕು. ಅಧಿಕಾರಿಗಳು ತಾಕತ್ತಿದ್ದರೆ ತಡೆದು ತೋರಿಸಲಿ ಎಂದು ಸುನೀಲ ಹೆಗಡೆ ಗುಡುಗಿದರು.
ಒಂದು ವೇಳೆ ಕಾರ್ಖಾನೆಯವರು ಸಂಚಿನಿಂದ ಕಬ್ಬು ತುಂಬಿ ವಾಹನಗಳನ್ನು ರಸ್ತೆಗೆ ಇಳಿಸಿದರೆ ತಾಳ್ಮೆ ಕಳೆದುಕೊಂಡಿರುವ ರೈತರು ಮತ್ತು ನಾವು ಅದನ್ನು ತಡೆಯುವುದಷ್ಟೇ ಅಲ್ಲ ಬೆಂಕಿ ಹಚ್ಚುವ ಕೆಲಸಕ್ಕೂ ಮುಂದಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜೀವೋಜಿ ಮಾತನಾಡಿ, ಕಳೆದ ಅನೇಕ ವರ್ಷಗಳ ಕಾಲ ಹಾನಿಯನ್ನು ನಾವು ಅನುಭವಿಸಿದ್ದೇವೆ ಇನ್ನು ಮುಂದೆ ಈ ರೀತಿ ಆಗುವುದಕ್ಕೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದರು.
ಕಳೆದ 5 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಯುತ್ತಿದೆ. ಸ್ಥಳೀಯ ಶಾಸಕ ದೇಶಪಾಂಡೆ ಅವರು ಸ್ವಕ್ಷೇತ್ರದಲ್ಲೇ ಇದ್ದರೂ ಸೌಜನ್ಯಕ್ಕಾದರೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸದಿರುವುದು ಅವರ ರೈತಪರ ಕಾಳಜಿಯನ್ನು ತೋರಿಸುತ್ತದೆ ಎಂದು ಜೀವೋಜಿ ವ್ಯಂಗವಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ಎಲ್. ಘೊಟ್ನೇಕರ ಮಾತನಾಡಿ, ಈ ಕಾರ್ಖಾನೆ ರೈತರಿಗೆ ಕಾಮಧೇನು ಆಗಿರದೆ ಖಸಾಯಿ ಖಾನೆ ಆಗಿದೆ. 200 ವರ್ಷ ಹಳೆಯ ಈ ಕಾರ್ಖಾನೆ ಬ್ರಿಟಿಷರಿಗಿಂತೂ ಅತ್ಯಂತ ಕೆಟ್ಟದಾಗಿದ್ದು ರೈತರ ಮೇಲಿನ ಇವರ ದೌರ್ಜನ್ಯ ನಿಲ್ಲಬೇಕು ಎಂದರು. ಹಳಿಯಾಳ, ಅಳ್ನಾವರ, ಕಲಘಟಗಿ, ಧಾರವಾಡ ಭಾಗದ ಸಾವಿರಾರು ಕಬ್ಬು ಬೆಳೆಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶಂಕರ ಕಾಜಗಾರ, ಸುರೇಶ ಶಿವಣ್ಣವರ, ಅಶೋಕ ಮೇಟಿ, ಪ್ರಕಾಶ ಪಾಕ್ರೆ, ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ಪುಂಡಲಿಕ ಗೋಡಿಮನಿ, ಉಳವಪ್ಪ ಬಡಿಗೇರ ಇದ್ದರು.
ರೈತರ ಪ್ರತಿಭಟನೆ ಮುಂದುವರಿಯುತ್ತಿದ್ದಂತೆ ಎಚ್ಚೆತ್ತ ಸಕ್ಕರೆ ಕಾರ್ಖಾನೆಯವರು ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಮತ್ತು ಪೊಲೀಸ್ ಇಲಾಖೆಯವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮುಂದಿನ ಎರಡು ದಿನಗಳಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ. ಅಲ್ಲಿಯವರೆಗೂ ಕಾರ್ಖಾನೆ ಆರಂಭಿಸುವುದಿಲ್ಲ ಎಂಬ ಭರವಸೆ ನೀಡಿದರು. ರೈತರು ತಾತ್ಕಾಲಿಕವಾಗಿ ರಾಸ್ತಾ ರೋಖೋವನ್ನು ಹಿಂದಕ್ಕೆ ಪಡೆದರು.
ರೈತರ ಪರ ಹೋರಾಟ ಮಾಡುವ ರೈತ ಮುಖಂಡರ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡುವ ಕಾರ್ಯ ಹಳಿಯಾಳದಲ್ಲಿ ನಡೆಯುತ್ತದೆ. ಆದರೇ ನಾವು ನ್ಯಾಯ ದೊರಕುವವರೆಗೆ ಹೋರಾಟ ಕೈಬಿಡುವುದಿಲ್ಲ. ಸಂದೀಪಕುಮಾರ ಬೋಬಾಟಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಉಕ ಜಿಲ್ಲಾಧ್ಯಕ್ಷ