

ಮಂಡ್ಯ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಸೆ.9ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 31,556 ಪ್ರಕರಣಗಳು ಇತ್ಯರ್ಥವಾಗಿದೆ. ವಿಶೇಷವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಆರು ಜೋಡಿಯನ್ನು ನ್ಯಾಯಾಧೀಶರು ಒಂದು ಮಾಡಲಾಗಿದೆ.
ದಾಂಪತ್ಯದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಆರು ಜೋಡಿ ಜಿಲ್ಲೆಯ ವಿವಿಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಅಂತೆಯೇ ವಿಚಾರಣೆಗೆಂದು ಲೋಕ ಅದಾಲತ್‌ನಲ್ಲಿ ಭಾಗವಹಿಸಿದ್ದರು. ದಾಂಪತ್ಯದಲ್ಲಿ ತೀವ್ರ ಭಿನ್ನಾಭಿಪ್ರಾಯ ಕಂಡುಬಂದು, ನ್ಯಾಯಾಲಯದಲ್ಲಿ ಹಲವು ವರ್ಷದಿಂದ ವಿಚಾರಣೆ ನಡೆದು ವಿಚ್ಛೇದನ ಹಂತ ತಲುಪಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರ ಸಮ್ಮುಖದಲ್ಲಿ ವಕೀಲರು ಹಾಗಾ ಸಂಧಾನಕಾರರು ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದೆ. ಅಂತೆಯೇ ಮುಂದೆ ತಪ್ಪು ಹಾದಿ ತುಳಿಯದಂತೆ ಹಾಗೂ ಯಾವುದೇ ಭಿನ್ನಾಭಿಪ್ರಾಯ ಬರದಂತೆ ಸಂತೋಷದಿಂದ ದಾಂಪತ್ಯ ಜೀವನ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಜೋಡಿ ಮತ್ತೊಮ್ಮೆ ಹಾರ ಬದಲಾಯಿಸಿ, ಸಿಹಿ ತಿನ್ನಿಸಿ ಮುಂದಿನ ಜೀವನಕ್ಕೆ ಕಾಲಿಟ್ಟರು.
ಇನ್ನು ವಿವಿಧ ನ್ಯಾಯಾಲಯಗಳಲ್ಲಿ ಹಲವಾರು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಒಟ್ಟು 4,031 ಹಾಗೂ 27,525 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಮಂಡ್ಯ ನಗರದ ವಿವಿಧ ನ್ಯಾಯಾಲಯಗಳಲ್ಲಿ 23,993 ಪ್ರಕರಣ, ಮದ್ದೂರಿನ ವಿವಿಧ ನ್ಯಾಯಾಲಯಗಳಲ್ಲಿ 1,558, ಶ್ರೀರಂಗಪಟ್ಟಣದಲ್ಲಿ 1,641, ಪಾಂಡವಪುರದಲ್ಲಿ 450, ಮಳವಳ್ಳಿಯಲ್ಲಿ 1,462, ನಾಗಮಂಗಲದಲ್ಲಿ 496 ಹಾಗೂ ಕೆ.ಆರ್.ಪೇಟೆಯ ವಿವಿಧ ನ್ಯಾಯಾಲಯಗಳಲ್ಲಿ 1956 ಪ್ರಕರಣ ಇತ್ಯರ್ಥಗೊಂಡಿವೆ.