ಆರು ದಿನಗಳ ಅನಿರ್ದಿಷ್ಟಾವಧಿ ಪ್ರತಿಭಟನೆ ಅಂತ್ಯ

11-kollegalphoto-1
ಕೊಳ್ಳೇಗಾಲ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ರೈತ ಸಂಘ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ರೈತ ಮುಖಂಡ ತೇರಂಬಳ್ಳಿ ಮಹದೇವಪ್ಪ, ಮುಳ್ಳೂರು ಷಣ್ಮುಖಸ್ವಾಮಿ, ಮೂರ್ತಿ, ಲಕ್ಷ್ಮಣ ಮೂರ್ತಿ, ರೇಚಣಸ್ವಾಮಿ, ರಾಮಕೃಷ್ಣ, ರಾಜಣ್ಣ ಮೋಳೆ, ಗೌರಮ್ಮ, ವೀರಭದ್ರಸ್ವಾಮಿ, ಆಯಾಜ್ ಇತರರು ಇದ್ದರು.
Published on

ಕೊಳ್ಳೇಗಾಲ: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಧನಗೆರೆ ಗ್ರಾಪಂ ಪಿಡಿಒ ಹಾಗೂ ತಾಪಂ ಇಒ ವಿರುದ್ಧ ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಮಂಗಳವಾರ ಅಂತ್ಯಗೊಂಡಿದೆ.

ಸರಗೂರು ಗ್ರಾಮದ ನಿವಾಸಿ ಗೌರಮ್ಮ ತಮಗೆ ಸೇರಿದ ವಾಸದ ಮನೆಯ ಇ-ಸ್ವತ್ತು ನೀಡುವಂತೆ ಮನವಿ ಮಾಡಿದ್ದರೂ ಧನಗೆರೆ ಪಂಚಾಯಿತಿ ಪಿಡಿಒ ಕಮಲ್‌ರಾಜ್ ನೀಡಿರಲಿಲ್ಲ. ನಿಮ್ಮ ಜಾಗದ ವಿಚಾರ ಕೋರ್ಟ್‌ನಲ್ಲಿದೆ ಎಂದು ಸಬೂಬು ಹೇಳಿ ಕಳುಹಿಸಿದ್ದರು. ಈ ಬಗ್ಗೆ ದೂರು ನೀಡಲು ಫೆ.6 ರಂದು ರೈತ ಸಂಘದ ಮುಖಂಡರು ಹಾಗೂ ಕರವೇ (ಪ್ರವೀಣ್ ಶೆಟ್ಟಿ) ಬಣದ ಪದಾಧಿಕಾರಿಗಳೊಂದಿಗೆ ಗೌರಮ್ಮ ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಭೇಟಿಗೆ ಆಗಮಿಸಿದ್ದರು. ನೊಂದವರು ಮಾತ್ರ ಅರ್ಜಿ ತರಬೇಕು, ಅವರ ಪರ ಯಾರೂ ಬರುವ ಅಗತ್ಯ ಇಲ್ಲ ಎಂದು ಗುರುಶಾಂತಪ್ಪ ಬೆಳ್ಳುಂಡಗಿ ಹೇಳಿದ್ದರು. ಈ ವೇಳೆ ಹೋರಾಟಗಾರರು ಹಾಗೂ ಇಒ ನಡುವೆ ಮಾತಿನ ಚಕಮಕಿ ನಡೆಯಿತು. ನ್ಯಾಯ ಕೇಳಲು ಬಂದ ರೈತರನ್ನು ಮಧ್ಯವರ್ತಿಗಳು ಎಂಬ ಪದ ಬಳಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗುರುಶಾಂತಪ್ಪ ಬೆಳ್ಳುಂಡಗಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳವಾರ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಅವರು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಟಗರಪುರದಿಂದ ಗೋಪಿನಾಥಂವರೆಗೂ ಹಕ್ಕುಪತ್ರ ನೀಡಿ ಇ-ಸ್ವತ್ತು ನೀಡಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸ್ಥಳಕ್ಕೆ ಇ-ಸ್ವತ್ತು ಮಾಡಬೇಕು, ಒತ್ತುವರಿ ತೆರವುಗೊಳಿಸಿ ಕೆರೆಗಳ ರಕ್ಷಣೆ ಮಾಡಬೇಕು. ಗೌರಮ್ಮ ವಿಚಾರ ಬಗ್ಗೆ ಸರ್ವೇ ನಡೆಸಬೇಕು ಎಂದು ಆರ್‌ಟಿಐ ಕಾರ್ಯಕರ್ತ ದಶರಥ್, ರೈತ ಮುಖಂಡ ರಾಮಕೃಷ್ಣ ಇತರೆ ಮುಖಂಡರು ಬೇಡಿಕೆ ಸಲ್ಲಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನ ಸೆಳೆಯುವುದಾಗಿ ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮೀ ಭರವಸೆ ನೀಡಿದರು.

ರೈತ ಮುಖಂಡ ತೇರಂಬಳ್ಳಿ ಮಹದೇವಪ್ಪ, ಮುಳ್ಳೂರು ಷಣ್ಮುಖಸ್ವಾಮಿ, ಮೂರ್ತಿ, ಲಕ್ಷಣ ಮೂರ್ತಿ, ರೇಚಣಸ್ವಾಮಿ, ರಾಮಕೃಷ್ಣ, ರಾಜಣ್ಣ ಮೋಳೆ, ಗೌರಮ್ಮ, ವೀರಭದ್ರಸ್ವಾಮಿ, ಆಯಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net