

ಹುಬ್ಬಳ್ಳಿ: ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿ ದೇಶದಲ್ಲಿ 6 ಕೋಟಿ ಯುವಕರಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ವಿದ್ಯುನ್ಮಾನ ಖಾತೆ ರಾಜ್ಯ ಸಚಿವ ರಾಜೀವ ಚಂದ್ರಶೇಖರ ತಿಳಿಸಿದರು.
ಇಲ್ಲಿಯ ಗದಗ ರಸ್ತೆಯ ಚಾಲುಕ್ಯ ರೈಲ್ವೆ ಇನ್ಸ್ಟಿಟ್ಯೂಟ್ನಲ್ಲಿ ಭಾನುವಾರ ಆಯೋಜಿಸಿದ್ದ ಪಿಎಂ ವಿಶ್ವ ಕರ್ಮ ಯೋಜನೆಯ ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2014ಕ್ಕೆ ಮೊದಲು ದೇಶದಲ್ಲಿ 31 ಕೋಟಿ ಯುವಕರಿಗೆ ಔಪಚಾರಿಕ ಶಿಕ್ಷಣವೂ ಇರಲಿಲ್ಲ. ಕೌಶಲವೂ ಇರಲಿಲ್ಲ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲಾಗಿದೆ ಎಂದರು.
ಪಿಎಂ ವಿಶ್ವಕರ್ಮ ಯೋಜನೆಯು ಕುಶಲಕರ್ವಿುಗಳಿಗೆ ಆರ್ಥಿಕ ನೆರವನ್ನು ಒದಗಿಸಲಿದ್ದು, ಇದರಿಂದ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದರು.
ವಿಧಾನ್ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಾಮಾನ್ಯವಾಗಿ ಆಭರಣ ತಯಾರಕರನ್ನು ಮಾತ್ರ ಕುಶಲಕರ್ವಿುಗಳು (ಆರ್ಟಿಸನ್) ಎಂದು ಪರಿಗಣಿಸುತ್ತ ಬಂದಿದ್ದೇವೆ. ಅದರೆ, ಕೇಂದ್ರ ಸರ್ಕಾರ 18 ಸಾಂಪ್ರದಾಯಿಕ ವೃತ್ತಿನಿರತ ಕುಶಲಕರ್ವಿುಗಳನ್ನು ಗುರುತಿಸಿ ಪಿಎಂ ವಿಶ್ವಕರ್ಮ ಯೋಜನೆಯಡಿ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿಶ್ವಕರ್ಮರಿಗೆ ಎಲ್ಲರ ಸಹಕಾರ ಬೇಕು. ಈ ಸಮಾಜವು ಮುಂದೆ ಬರುವಂತೆ ಉತ್ತಮವಾದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯು ಹತ್ತಾರು ಕುಶಲಕರ್ವಿು ಕುಟುಂಬಗಳಿಗೆ ನೆರವಾಗಲಿದೆ. ಕುಶಲಕರ್ವಿುಗಳು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಶಾಸಕ ಅರವಿಂದ ಬೆಲ್ಲದ, ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷಕುಮಾರ ವರ್ವ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂತೋಷ ಹೆಗಡೆ, ಎಂಎಸ್ಎಂಇ ನಿರ್ದೇಶಕ (ಪ್ರಭಾರ) ಬಿ.ಎಸ್. ಜವಳಗಿ ಇದ್ದರು. ಸಹಾಯಕ ವಾಣಿಜ್ಯ ವ್ಯವಸ್ಥಾಪಕಿ ನಿವೇದಿತಾ ಬಾಲಕಟ್ಟಿಯವರ್ ನಿರೂಪಿಸಿದರು.