

ರಾಯಚೂರು ತುಂಗಾಭದ್ರಾ ಜಲಾಶಯದ ಆರು ಕ್ರಷ್ಟ್‌ಗ್ರೇಟ್ ನಿರ್ವಹಣೆ ಯಾಗುತ್ತಿಲ್ಲವೆಂದು ಸಚಿವ ಎಸ್.ಶಿವರಾಜ ತಂಗಡಗಿ ಬೇಜವಬ್ದಾರಿ ಹೇಳಿಕೆ ನೀಡಿ ರೈತರಲ್ಲಿ ಆತಂಕ ಮೂಡಿಸಿದ್ದಾರೆ. ಈ ಕೂಡಲೇ ನಾಲ್ಕು ಜಿಲ್ಲೆಗಳ ಸಚಿವರು ಹಾಗೂ ಶಾಸಕರು ಸರ್ಕಾರ ಮೇಲೆ ಒತ್ತಡ ಹಾಕಿ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಾಭದ್ರಾ ಆಣೆಕಟ್ಟಿನ ಸುರಕ್ಷತೆಯ ಕುರಿತು ತಜ್ಞರು ನೀಡಿರುವ ವರದಿ ಸರ್ಕಾರದ ಬಳಿಯಿದ್ದು, ಪೂರ್ವ ಮಾಹಿತಿಯಿದ್ದರೂ ಹೇಳದೇ ಜಲಾಶಯ ಭರ್ತಿಯಾಗಿ ನಿಂತಿರುವಾಗ ಗೇಟ್ ಶಿಥಿಲವಾಗಿವೆಂದು ಆತಂಕ ಮೂಡಿಸಿದ್ದಾರೆ. ರಾಜ್ಯ ಸರ್ಕಾರ ಸಕಾಲದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿದ್ದರೇ ಸವಾಲೇ ಉದ್ಭವಿಸುತ್ತಿರಲಿಲ್ಲ. 59 ಕೋಟಿ ರೂ. ವೆಚ್ಚದಲ್ಲಿ 32 ಗೇಟ್‌ಗಳನ್ನು ದುರಸ್ತಿಗೆ ಟೆಂಡರ್ ಕರೆದು ಸರ್ಕಾರದ ಮೇಲೆ ವಿಶ್ವಾಸ ಇಲ್ಲದೇ ಇರುವದರಿಂದ ಯಾವುದೇ ಗುತ್ತಿಗೆದಾರರು ಭಾಗವಹಿಸಿಲ್ಲ. ರಾಜ್ಯ ಸರ್ಕಾರ ಸಂಪೂರ್ಣ ವೈಫಲ್ಯತೇ ರೈತರ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಅಗಷ್ಟ್ ತಿಂಗಳಲ್ಲಿಯೇ 19 ಕ್ರಸ್ಟಗೇಟ್ ಕಿತ್ತಿ ಹೋಗಿತ್ತು. ಮೂರು ತಿಂಗಳ ಅವಧಿಯಲ್ಲಿ 33 ಗೇಟ್ 11 ಜನ ಗುತ್ತಿಗೆದಾರರಿಗೆ ನೀಡಿ ದುರಸ್ತಿಗೊಳಿಸಬಹುದಿತ್ತು. ಆದರೆ ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವರು, ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ನಿರ್ಲಕ್ಷ್ಯ ವಹಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ ಹೊರತು ರೈತರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ ಎಂದರು.
ರೈತರನ್ನು ಭಯ ಬಿಳಿಸಲು ಆರು ಗೇಟ್ ಲಾಕ್ ಆಗಿವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ. ಏನಾದರೂ ಅಪಾಯವಾದಲ್ಲಿ ಪ್ರತಿ ಎಕರೆ ಒಂದು ಲಕ್ಷ ರೂ. ಪರಿಹಾರ ನೀಡಬೇಕಾಗುತ್ತದೆ. ಎರಡು ಬೆಳಗಳಿಗೆ ನೀರು ಪೂರೈಸುವ ಭರವಸೆ ರಾಜ್ಯ ಸರ್ಕಾರ ನೀಡಬೇಕು. ಅನಗತ್ಯ ವಿವಾದ ಸೃಷ್ಟಿಸಿರುವ ಶಿವರಾಜ ತಂಗಡಗಿಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದನಗೌಡ ನೆಲಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರರೆಡ್ಡಿ, ವಿ.ಪಿ.ರೆಡ್ಡಿ, ಸಂತೋಷ ರಾಜಗುರು ಇದ್ದರು.