

ರಟ್ಟಿಹಳ್ಳಿ: ಕಿಡಿಗೇಡಿಗಳು ಹೆಚ್ಚಿದ ಬೆಂಕಿಯಿಂದಾಗಿ ಎರಡು ದನದ ಕೊಟ್ಟಿಗೆಗಳು ಸುಟ್ಟು ಭಸ್ಮವಾಗಿದ್ದು, ಕೊಟ್ಟಿಗೆಯಲ್ಲಿದ್ದ ಕೃಷಿ ಉಪಕರಣಗಳು ಹಾಗೂ ಆರು ಆಕಳುಗಳು ಮೃತಪಟ್ಟ ಮನಕಲಕುವ ಘಟನೆ ತಾಲೂಕಿನ ಕಡೂರ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಗ್ರಾಮದ ನಾಗಪ್ಪ ಫಕೀರಪ್ಪ ಅಸುಂಡಿ ಮತ್ತು ಹನುಮಂತಪ್ಪ ಶೇಖಪ್ಪ ಅಸುಂಡಿ ಅವರ ಎರಡು ದನದ ಕೊಟ್ಟಿಗೆಗಳಿಗೆ ಯಾರೋ ಕಿಡಗೇಡಿಗಳು ಮಧ್ಯರಾತ್ರಿ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಆರು ಆಕಳುಗಳು ಸಾವನ್ನಪ್ಪಿವೆ. ನಾಗಪ್ಪ ಅಸುಂಡಿ ಅವರ ನಾಲ್ಕು ಆಕಳುಗಳಲ್ಲಿ 2 ಆಕಳು ಗರ್ಭ ಧರಿಸಿದ್ದವು. ಹನುಮಂತಪ್ಪ ಅವರ 2 ಆಕಳು ಬೆಂಕಿಯಲ್ಲಿ ಬಿದ್ದು ಮೃತಪಟ್ಟಿವೆ.
ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಸುಮಾರು 5 ಲಕ್ಷದ ಮೌಲ್ಯದ ಕೃಷಿ ಉಪಕರಣಗಳು, ಮನೆಯ ಕಟ್ಟಡದ ಸಾಮಗ್ರಿಗಳು, ಆಹಾರ ಸಾಮಾಗ್ರಿ ಸುಟ್ಟು ಹೋಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಗ್ನಿಶಾಮಕ ವಾಹನ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಶಾಸಕ ಯು.ಬಿ. ಬಣಕಾರ, ತಹಸೀಲ್ದಾರ್ ಕೆ. ಗುರುಬಸವರಾಜ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಆಕಳುಗಳಿಗೆ ಅನುಗ್ರಹ ಯೋಜನೆಯಡಿ ತಲಾ 10 ಸಾವಿರ ರೂ. ಪರಿಹಾರವನ್ನು ಪಶು ಇಲಾಖೆಯಿಂದ ನೀಡಬಹುದಾಗಿದೆ ಎಂದು ವೈದ್ಯ ಡಾ.ಪ್ರವೀಣ ಮರಿಗೌಡ್ರು ತಿಳಿಸಿದ್ದಾರೆ.