

ವಿಜಯವಾಣಿ ಸುದ್ದಿಜಾಲ ಉಡುಪಿ
ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕುಂಜಾಲು ಜಂಕ್ಷನ್ ಬಳಿ ಜೂ.28ರಂದು ರಾತ್ರಿ 11:30ರ ವೇಳೆಯಲ್ಲಿ ದನದ ರುಂಡ ಹಾಗೂ ಅಸ್ಥಿ ಪತ್ತೆ ಘಟನೆಗೆ ಸಂಬಂಧಿಸಿ 6 ಜನರನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ ಮಾಹಿತಿ ನೀಡಿದರು.
ಉಡುಪಿಯ ತಮ್ಮ ಕಚೇರಿಯಲ್ಲಿ ಜೂನ್ 30ರಂದು ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಧಿತರೆಲ್ಲರೂ ಬ್ರಹ್ಮವಾರ ತಾಲೂಕಿನವರೇ ಆಗಿದ್ದಾರೆ. ದನ ಮಾರಾಟ ಮಾಡಿದ, ದನವನ್ನು ಕಡಿದ, ಮಾಂಸವನ್ನು ಸಂಗ್ರಹಿಸಿದ ಹಾಗೂ ಸಾಗಾಟಕ್ಕೆ ಸಹಾಯ ಮಾಡಿದ ಎಲ್ಲರ ವಿರುದ್ಧವೂ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ರಸ್ತೆಯಲ್ಲಿ ದನದ ರುಂಡ ಬಿದ್ದಿರುವ ಸುದ್ದಿ ತಿಳಿದೊಡನೆ ಮನಸೋ ಇಚ್ಛೆ ಹೇಳಿಕೆಗಳು, ಪೊಲೀಸ್ ಇಲಾಖೆ ವಿರುದ್ಧದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿವೆ. ಇಂತಹ ಸೂಕ್ಷ್ಮ ಹಾಗೂ ಕೋಮುದ್ವೇಷದ ಸಂಗತಿಯನ್ನು ಬಿತ್ತರಿಸಬಾರದು. ಕೋಮು ಸೌಹಾರ್ದತೆ ಕಾಪಾಡುವುದು ನಮ್ಮ ಕರ್ತವ್ಯ. ಅದನ್ನು ನಿಭಾಯಿಸುತ್ತೇವೆ. ಅನಗತ್ಯವಾಗಿ ಸುಳ್ಳು ಸುದ್ದಿ, ಕೋಮುದ್ವೇಷದ ಮಾಹಿತಿ ಹರಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. | ಹರಿರಾಮ್ ಶಂಕರ. ಉಡುಪಿ ಎಸ್ಪಿ