ಶಿವರಾಜಕುಮಾರ್ ಡಾನ್ಸ್‌ಗೆ ಸಭಿಕರು ಫಿದಾ

mysore
Published on

ಮೈಸೂರು: ನಗರದ ಕಲಾಮಂದಿರದಲ್ಲಿ ಕಿಕ್ಕಿರಿದು ತುಂಬಿದ ಜನಸ್ತೋಮದ ಎದುರು ನಾಯಕ ನಟ ಶಿವರಾಜ್‌ಕುಮಾರ್ ಅವರು ಹೆಜ್ಜೆ ಹಾಕುವ ಮೂಲಕ ರಂಜಿಸಿದರು.


ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥವಾಗಿ ಕರ್ನಾಟಕ ಪವರ್ ಇಂಜಿನಿಯರ್ಸ್‌ ಅಕಾಡೆಮಿ ವತಿಯಿಂದ ಇಲ್ಲಿ ಆಯೋಜಿಸಿದ್ದ ಅಪ್ಪು ನಮನ ಮತ್ತು ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಶಿವಣ್ಣ ನರ್ತನಕ್ಕೆ ಸಭಿಕರು ಫಿದಾ ಆದರು.


ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಅವರನ್ನು ಚಪ್ಪಾಳೆ ಮೂಲಕ ನೆರೆದವರು ಸ್ವಾಗತ ಕೋರಿದರು. ಬಳಿಕ ವೇದಿಕೆ ಏರಿದ ಶಿವಣ್ಣ ಮೊದಲಿಗೆ ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ, ಚಂದ್ರ ಮೇಲೆ ಬಂದ, ಮಿನುಗು ತಾರೆ ಅಂದ, ನೋಡು ಎಂಥ ಚಂದ, ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ’ ಎಂಬ ಗೀತೆಯನ್ನು ಸೊಗಸಾಗಿ ಹಾಡಿದರು.


ಪ್ರೇಕ್ಷಕರ ಒತ್ತಾಯದ ಮೇರೆಗೆ ತಮ್ಮ ಅಭಿನಯದ ಮೈಲಾರಿ ಚಿತ್ರದ ‘ಊರಿಂದ ಓಡಿಬಂದ ಜೋಗಿನಾ ಅಲ್ಲರಿ..ಮೈಲಾಪುರ ಮೈಲಾರಿ’ ಗೀತೆಯನ್ನು ಹಾಡುತ್ತಲೇ ಹೆಜ್ಜೆ ಹಾಕಿ ಸಭಿಕರನ್ನು ಮನರಂಜಿಸಿದರು.


ಬಳಿಕ ಮಾತನಾಡಿದ ಶಿವಣ್ಣ ‘ಅಪ್ಪು’ ಕರುನಾಡಿನ ಮನೆ ಮನಗಳಿಗೆ ತಲುಪಿದ್ದಾನೆ. ತಮ್ಮ ಅಭಿನಯದ ಮೂಲಕ ಜನರನ್ನು ಮನಸೂರೆಗೊಂಡಿದ್ದಾನೆ. ಇದರೊಂದಿಗೆ ಮನೆ ಮಾತಾಗಿದ್ದಾನೆ. ಹೀಗಾಗಿ, ಆತ ನಿಜವಾದ ಅರ್ಥದಲ್ಲೂ ‘ಕರ್ನಾಟಕ ರತ್ನ’ ಎಂದು ಬಣ್ಣಿಸಿದರು.


ಜನರು ಅಪ್ಪು ಮೇಲೆ ತೋರಿದ ಪ್ರೀತಿ, ಕಾಳಜಿಯನ್ನು ರಾಜ್‌ಕುಮಾರ್ ಕುಟುಂಬ ಎಂದೂ ಮರೆಯುವುದಿಲ್ಲ. ಕಳೆದ 60-70 ವರ್ಷದಿಂದ ಈ ಮನೆತನಕ್ಕೆ ಅಪಾರ ಗೌರವ, ಪ್ರೀತಿಯನ್ನು ಉಣಬಡಿಸಿದ್ದೀರಿ. ಈ ಕಾರಣಕ್ಕೆ ಈ ಮಟ್ಟಿಗೆ ಸಾಧನೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತದೆ ಎಂದರು.


ಶಿವರಾಜ್‌ಕುಮಾರ್, ಗೀತಾ ಶಿವರಾಜಕುಮಾರ್ ದಂಪತಿ, ಶಿಲ್ಪಿ ಅರುಣ್ ಯೋಗಿರಾಜ್, ಅಯೋಧ್ಯದ ರಾಮಮಂದಿರದ ಬಾಲರಾಮನ ಪ್ರತಿಮೆಗೆ ಕಲ್ಲುದಾನ ಮಾಡಿದ ರಾಮದಾಸ್ ಅವರನ್ನು ಸನ್ಮಾನಿಸಲಾಯಿತು.


ಸಂಗೀತ ರಸ ಸಂಜೆಯಲ್ಲಿ ಗಾಯಕ ಹರ್ಷ, ಅಶ್ವಿನ್‌ಶರ್ಮ್, ದಿವ್ಯಾ ರಾಘವನ್, ದಿವ್ಯಾ ರಾಮಚಂದ್ರ ಅಪ್ಪು ಅಭಿನಯದ ಸಿನಿಮಾಗಳು ಸೇರಿದಂತೆ ವಿವಿಧ ಚಿತ್ರಗಳ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು.


ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ, ಅಕಾಡೆಮಿಯ ಅಧ್ಯಕ್ಷ ಕೆ.ಮುನಿಗೋಪಾಲ್ ರಾಜು, ಕಾರ್ಯದರ್ಶಿ ಎಂ.ಎಚ್.ಜಗದೀಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net