ಮರಾಠಾ ಸಮಾಜದ ಕ್ಷಮೆ ಯಾಚಿಸಿದ ಶಿವಾನಂದ ಅರಳಿಕಟ್ಟಿ

Kundgol news
Published on

ಕುಂದಗೋಳ: ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ನನ್ನ ಕಡೆಯಿಂದ ತಪ್ಪಾಗಿದೆ. ಈ ಕುರಿತು ಶಿವಾಜಿ ಮಹಾರಾಜರ ಅಭಿಮಾನಿಗಳು ಹಾಗೂ ಅನುಯಾಯಿಗಳು ಮತ್ತು ಮರಾಠಾ ಸಮಾಜದ ಹಿರಿಯರ ಕ್ಷಮೆ ಯಾಚಿಸುವುದಾಗಿ ಶಿವಾನಂದ ಪ್ರಕಾಶ ಅರಳಿಕಟ್ಟಿ ಹೇಳಿದರು.

ಸೋಮವಾರ ಕುಂದಗೋಳ ಪಟ್ಟಣದ ಮರಾಠಾ ಭವನದದಲ್ಲಿ ಮರಾಠಾ ಹಾಗೂ ಕುರುಬ ಸಮಾಜದ ಸಭೆಯಲ್ಲಿ ಸಮಾಜದ ಗುರು-ಹಿರಿಯರ ಮುಂದೆ ಕ್ಷಮೆ ಯಾಚಿಸಿ ಮಾತನಾಡಿದ ಅವರು, ನಾನು ಮಾಡಿದ ತಪ್ಪಿನಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಇದರಿಂದ ನನ್ನ ಮನಸ್ಸಿಗೆ ನೋವಾಗಿದ್ದು, ನನ್ನಿಂದ ತಪ್ಪಾಗಿದೆ. ಇನ್ನುಮುಂದೆ ಇಂತಹ ಘಟನೆ ಆಗದಂತೆ ಎಚ್ಚರಿಕೆ ವಹಿಸುತ್ತೇನೆ. ಈ ಸಭೆಯ ಮೂಲಕ ಸಮಾಜದ ಗುರುಹಿರಿಯ ಕ್ಷಮೆ ಕೋರುತ್ತೇನೆ ಹೇಳಿದರು.

ಸಮಾಜದ ಹಿರಿಯ ಲಕ್ಷ್ಮಣ ಚುಳಕಿ ಮಾತನಾಡಿ, ಕಾಳಿದಾಸ ನಗರ ಹಾಗೂ ಶಿವಾಜಿ ನಗರದವರು ಹಿಂದಿನಿಂದಲೂ ಅಣ್ಣ-ತಮ್ಮಂದಿರಂತೆ ನಡೆದುಕೊಂಡು ಬಂದಿದ್ದೇವೆ. ಮುಂದೆಯೂ ಹೀಗೆ ಮುನ್ನಡೆಯೋಣ. ಇಂತಹ ಘಟನೆಗಳು ನಡೆದರೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಒಗ್ಗಟ್ಟಿನಿಂದ ಒಳ್ಳೆಯ ಕೆಲಸ ಕಾರ್ಯಗಳಿಗೆ ಕೈ ಜೋಡಿಸೋಣ ಎಂದು ಹೇಳಿದರು.

ಮರಾಠಾ ಸಮಾಜದ ಹಿರಿಯ ವಿಠ್ಠಲ ಚವ್ಹಾಣ ಮಾತನಾಡಿ, ಈಗಿನ ಯುವಕರು ಮಹಾ ಪುರುಷರ ತ್ಯಾಗ, ಬಲಿದಾನವನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಸಮಾಜದ ಯುವ ಮುಖಂಡ ಗಣೇಶ ಕೊಕಾಟೆ ಮಾತನಾಡಿದರು.

ಕುರುಬ ಸಮಾಜದ ಹಿರಿಯರಾದ ಮುದುಕಣ್ಣ ಮುಳ್ಳೊಳ್ಳಿ, ನೀಲಪ್ಪ ನಾಯಕರ, ಹನುಮಂತಪ್ಪ ತಹಶೀಲ್ದಾರ, ಬಸವರಾಜ ವಟವಟಿ, ಛಾಯಪ್ಪ ಹೊಸಮನಿ ಹಾಗೂ ಮರಾಠಾ ಸಮಾಜದ ಪ್ರಮುಖರಾದ ಜ್ಯೋತಿಬಾ ಖೈರೋಜಿ, ಶಂಕರ ಪರಮೇಕರ, ಮಹದೇವಪ್ಪ ಖಂಡೋಜಿ, ಶಾಮಣ್ಣ ಪವಾರ, ಜ್ಯೋತಿಬಾ ಸಿಂಧೆ, ಗಣೇಶ ಕೊಕಾಟೆ, ಪಾಂಡುರಂಗ ಕುಂಕೂರ, ಪರಶುರಾಮ ಮಿರಾಗಾಣಿ ಹಾಗೂ ಎರಡೂ ಸಮಾಜದ ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net