

ಬೀರೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೀರೂರು ರೈತರು ಬೆಂಬಲ ಸೂಚಿಸಿದರು.
ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಬಾಸೂರು ರವಿ ಮಾತನಾಡಿ, ಮಳೆ ಇಲ್ಲದೆ ತೀವ್ರ ಬರಗಾಲ ಆವರಿಸಿದ್ದು, ನಮ್ಮ ರಾಜ್ಯದ ರೈತರಿಗೆ ನೀರಿನ ಕೊರತೆಯಾಗಿದೆ. ಆದರೆ ಇರುವ ಕಾವೇರಿ ನೀರನ್ನು ಕುಡಿಯಲು ಹಾಗೂ ವ್ಯವಸಾಯಕ್ಕೆ ಬಳಸಿಕೊಳ್ಳಲು ಸಮಸ್ಯೆಯಿರುವಾಗ ರಾಜ್ಯ ಸರ್ಕಾರ ಪಕ್ಕದ ರಾಜ್ಯಕ್ಕೆ ನೀರು ಹರಿಸುತ್ತಿರುವುದು ನಮ್ಮ ರೈತರಿಗೆ ಮೋಸ ಮಾಡುತ್ತಿದೆ. ಕಾವೇರಿ ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರದಲ್ಲಿ ಕೃಷಿ ಹಾಗೂ ಜಲತಜ್ಞರಿದ್ದಾರೆ. ಅವರಿಗೆ ನಮ್ಮ ರಾಜ್ಯದ ವಾಸ್ತವ ಪರಿಸ್ಥಿತಿ ಅರಿವು ಅಗತ್ಯ ಎಂದರು.
ನೀರು ಹಂಚಿಕೆ ಸಂಬಂಧ ಸಂಕಷ್ಟ ಕಾಲದಲ್ಲಿ ರಾಜಕಾರಣ ಮಾಡುವ ತಮಿಳುನಾಡನ್ನು ಓಲೈಸುವ ರಾಜ್ಯ ಸರ್ಕಾರದ ಮನೋಭಾವ ಹಾಗೂ ನ್ಯಾಯ ಪೀಠವೂ ಕೂಡ ಪರಿಸ್ಥಿತಿ ಅರಿಯದೆ ನೀರು ಹರಿಸುವಂತೆ ನೀಡಿರುವ ಆದೇಶಗಳು ಗದಾ ಪ್ರಹಾರದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಕೋಡಿಹಳ್ಳಿ ಪ್ರದೀಪ್ ಮಾತನಾಡಿ, ರಾಜ್ಯದ ಜನತೆಗೆ ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ ಮೆಟಾಸಿಡ್ ಭಾಗ್ಯ ನೀಡಲಿ. ಬೇರೆ ರಾಜ್ಯಗಳಿಂದ ಅಕ್ಕಿ ಆಮದು ಮಾಡಿಕೊಂಡು ಅನ್ನಭಾಗ್ಯ ನೀಡುವ ಬದಲು ನಮ್ಮ ರೈತರಿಗೆ ವ್ಯವಸಾಯಕ್ಕೆ ನೀರು ನೀಡಿದಲ್ಲಿ ಅವರೇ ಭತ್ತ ಬೆಳೆದು ಸರ್ಕಾರಕ್ಕೆ ನೀಡುತ್ತಾರೆ. ಹಾಗಾಗಿ ಇರುವ ಕಾವೇರಿ ನೀರನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸಿದರು.