

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ವಿಚಾರವಾಗಿ ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗುವ ಆತಂಕ ಇದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಎಚ್ಚರಿಕೆ ನೀಡಿದರು.
ಚಿಕ್ಕಬಳ್ಳಾಪುರ ಕನ್ನಡ ಕಲಾ ಭವನದಲ್ಲಿ ಕನ್ನಡ ಸಾಹಿತ್ಯ 10ನೇ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲೇ ಬೋಧನೆ ಹಾಗೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವ ಎರಡು ಕನಸಿನ ಗುರಿಯೊಂದಿಗೆ ಕಸಾಪ ಪರಿಷತ್ತಿನ ಅಧ್ಯಕ್ಷ ಗಾದಿ ಏರಲಾಯಿತು. ಆದರೆ, ಈ ಎರಡರಲ್ಲೂ ಕಾನೂನಾತ್ಮಕ ಹಿನ್ನಡೆಯಾಗಿದೆೆ. ಈಗ ದೊಡ್ಡ ಭ್ರಮೆಯ ನಿರೀೆಯಲ್ಲಿರುವಂತೆ ಭಾಸವಾಗುತ್ತಿದೆ ಎಂದು ಬೇಸರಿಸಿದರು.
ಹರಿಯಾಣದಲ್ಲಿ ಸರ್ಕಾರದಿಂದ ಮೂಲಸೌಕರ್ಯ ಪಡೆದಿರುವ ಸಂಸ್ಥೆಗಳು 30 ಸಾವಿರಕ್ಕೂ ಹೆಚ್ಚು ಸಂಬಳದ ಹುದ್ದೆಗೆ ಸ್ಥಳಿಯರಿಗೆ ಆದ್ಯತೆ ನೀಡಬೇಕು. ಶೇ.20 ಹುದ್ದೆಗಳು ಹೊರಗಿನವರಿಗೆ ಹಾಗೂ ಶೇ.80 ಪ್ರಾದೇಶಿಕ ಭಾಷೆಯಲ್ಲಿ ಓದಿದವರಿಗೆ ಸಿಗಬೇಕೆಂಬ ಆದೇಶಕ್ಕೆ ನ್ಯಾಯಾಲಯವು ಒಂದೇ ದಿನ ತಡೆಯಾಜ್ಞೆ ನೀಡಿತು. ಕರ್ನಾಟಕದಲ್ಲಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಕಡ್ಡಾಯಗೊಳಿಸಿರುವುದರ ವಿರುದ್ಧ ಸವೋರ್ಚ್ಛ ನ್ಯಾಯಾಲಯವು ತೀರ್ಪು ನೀಡಿತು ಎಂದು ಬೇಸರಿಸಿದರು.
ಈಗಲಾದರೂ ರಾಜ್ಯದಲ್ಲಿ ಕನ್ನಡದ ಅಭಿಮಾನ, ಗರಿಮೆಯನ್ನು ಬಿತ್ತದಿದ್ದಲ್ಲಿ ಮತ್ತಷ್ಟು ಆತಂಕದ ಕರಾಳ ದಿನಗಳನ್ನು ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳದಿದ್ದಲ್ಲಿ ನಾಡದ್ರೋಹಿಗಳಾಗಿ ಉಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ನಾಡು ನುಡಿಯು ಮಸುಕಾಗುತ್ತಿರುವ ಲಕ್ಷಣ ಗೋಚರವಾಗುತ್ತಿವೆ. ಈ ನಿಟ್ಟಿನಲ್ಲಿ ಸಮ್ಮೇಳನಗಳು ಕನ್ನಡ ವಿವೇಕವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಬೇಕು. ಹಾಗೆಯೇ ರ್ನಿಣಯಗಳಿಗೆ ಅನುಗುಣವಾಗಿ ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಂಸತ ಶ್ಲೋಕಗಳ ಮೂಲಕ ಆಲಿಸುತ್ತಿದ್ದ ದೇವರನ್ನು ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಗೆ ಕರೆದುಕೊಂಡು ಬರುವಲ್ಲಿ ವಚನಗಳ ಪಾತ್ರ ಮಹತ್ತರವಾದುದು. ಹಿಂದೆ ಪರ ವಿಚಾರ ಹಾಗೂ ಪರ ಧರ್ಮಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಇಂದು ಪ್ರಶ್ನಿಸುವಂತಿಲ್ಲ. ಹೋರಾಟಗಾರರನ್ನು ಟೀಕಿಸಿ ಅಣಕಿಸುವಂತಹ ವಾತಾವರಣ ಇದೆ. ಕರ್ನಾಟಕದಲ್ಲಿ ಭಾಷಾ ಸಾಹಿತ್ಯ, ಶಿಲ್ಪಕಲೆ, ಪರಂಪರೆಗೆ ಜೈನರು, ಮುಸ್ಲಿಮರು, ಕ್ರಿಶ್ಚಿಯನ್ ಸೇರಿ ಹಲವು ಸಮುದಾಯಗಳು ಸಹ ವಿಶೇಷ ಕೊಡುಗೆಯನ್ನು ನೀಡಿವೆ ಎಂದು ತಿಳಿಸಿದರು.
ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮೀಜಿ,
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ ಮತ್ತಿತರರು ಇದ್ದರು.