

ಸಂಡೂರು: ಅತ್ಯಂತ ಹಿಂದುಳಿದಿರುವ ಕುಳುವ ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕ ಶ್ರಮಿಸುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ್ ಹೇಳಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಕೊರಮ, ಕೊರಚ, ಕುಳುವ ಮಹಾಸಭಾದಿಂದ ಹಮ್ಮಿಕೊಂಡಿದ್ದ ಶರಣ ನುಲಿ ಚಂದಯ್ಯ ಅವರ 918ನೇ ಜಯಂತಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆ ತೆಗೆದುಕೊಳ್ಳುವ ಸಮುದಾಯದ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲಾಗುವುದು.
ಸಮುದಾಯಕ್ಕೆ ಬೇಕಾದ ಜಾಗ ಹಾಗೂ ಸಮುದಾಯ ಭವನ ನಿರ್ಮಿಸಿ ಕೊಡಲಾಗುವುದು. ಕುಳುವ ಸಮಾಜಕ್ಕೆ ಸ್ವಾಮೀಜಿ ಇಲ್ಲವೆಂಬ ಕೊರಗಿದೆ. ಸಮಾಜದವರು ಒಪ್ಪಿ ಸೂಚಿಸಿದವರನ್ನು ಸ್ವಾಮೀಜಿಯನ್ನಾಗಿ ಮಾಡಲಾಗುವುದು ಎಂದರು. ಸಂಘದ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಮಾತನಾಡಿ, ಎಸ್‌ಸಿ ಗುಂಪಿನ 101 ಜಾತಿಗಳಲ್ಲಿರುವ ಕುಳುವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕಿದೆ ಎಂದರು. ಸಂಸದ ಈ. ತುಕಾರಾಮ್, ಶಾಸಕಿ ಅನ್ನಪೂರ್ಣ ತುಕಾರಾಮ್, ಸಾನ್ನಿಧ್ಯ ವಹಿಸಿದ್ದ ಪ್ರಭುಸ್ವಾಮೀಜಿ,
ಪುರುಷೋತ್ತಮಾನಂದ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಪಟ್ಟದ ಚಿನ್ಮಯ ಸ್ವಾಮೀಜಿ, ಕರ್ನಾಟಕ ಎಸ್‌ಸಿ-ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಮಾಜಿ ಶಾಸಕರಾದ ಜಿ. ಚಂದ್ರಣ್ಣ, ಭೀಮಾನಾಯ್ಕ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಎಂ. ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಕೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು.