

ಬೆಂಗಳೂರು: ಬೇರೆಯವರ ಸೈಟ್ಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ, ಬ್ಯಾಂಕ್ನಲ್ಲಿ ಸಾಲ ಪಡೆಯುತ್ತಿದ್ದ ಏಳು ವಂಚಕರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿ ವಿನಯ್ಕುಮಾರ್ ಅಲಿಯಾಸ್ ಸ್ಟ್ಯಾಂಪ್ ವಿನಿ (30) ಹಾಗೂ ಈತನಿಗೆ ಸಹಕರಿಸಿದ ಆರೋಪದಲ್ಲಿ ಜಯನಗರದ ವಿಶ್ವನಾಥ್, ಕುರುಬರಹಳ್ಳಿಯ ಸೈಯದ್, ಯೂಸೂಫ್, ನಾಗರಬಾವಿಯ ರಾಜ್ ಚಂದ್ರಶೇಖರ್, ಸುಂಕದಕಟ್ಟೆಯ ಶಿವಮ್ಮ, ಶಿವಲಿಂಗೇಗೌಡ ಎಂಬುವರನ್ನು ಬಂಧಿಸಿರುವುದಾಗಿ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬನೋತ್ ತಿಳಿಸಿದ್ದಾರೆ.
ಕುರುಬರಹಳ್ಳಿಯ ಕರ್ನಾಟಕ ಲೇಔಟ್ನ ಸೈಟ್ ಮಾಲಕಿ ರೂಪಲಕ್ಷ್ಮೀ ಅಮೆರಿಕದಲ್ಲಿ ನೆಲೆಸಿರುವುದನ್ನು ತಿಳಿದಿದ್ದ ವಿನಯ್, ತನ್ನ ಸಹಚರರ ಜತೆ ಸೇರಿ ನಕಲಿ ದಾಖಲೆ ಸೃಷ್ಟಿಸಿದ್ದನು. ಶಿವಮ್ಮಗೆ ಹಣದ ಆಮಿಷವೊಡ್ಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆತಂದು, ಆಕೆಯನ್ನೇ ಸೈಟ್ ಮಾಲಕಿ ರೂಪಲಕ್ಷ್ಮೀ ಎಂದು ಬಿಂಬಿಸಿ ನಿವೇಶನವನ್ನು 2019ರ ಜನವರಿಯಲ್ಲಿ ರಾಜ್ ಚಂದ್ರಶೇಖರ್ಗೆ ನೋಂದಣಿ ಮಾಡಿದ್ದರು. ಇದಾದ ಮೇಲೆ ಬಸವರಾಜ್ ಯರಗಲ್ ಹೆಸರಿಗೆ ನೋಂದಣಿ ಮಾಡಿಸಿ ಸಹಕಾರ ಬ್ಯಾಂಕ್ನಲ್ಲಿ 75 ಲಕ್ಷ ರೂ. ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ರೂಪಲಕ್ಷ್ಮೀ ಸಂಬಂಧಿಕರು ಅಕ್ರಮ ಗೊತ್ತಾಗಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಶಿವಮ್ಮ ಮತ್ತಿತರರ ವಿಚಾರಣೆ ನಡೆಸಿದಾಗ ಪ್ರಮುಖ ವಿನಯ್ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ 9 ಸೈಟ್ ಮಾರಾಟಕ್ಕೆ ಯತ್ನ: ನೈಸ್ ರಸ್ತೆ ಸಮೀಪದ ಲಕ್ಷ್ಮೀಪುರ ಗ್ರಾಮದ ಧರಿತ್ರಿ ಲೇಔಟ್ನಲ್ಲಿ 9 ಸೈಟ್ಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಬಳಿಸಲು ಆರೋಪಿ ಬಿ.ಎನ್. ರಮೇಶ್ ಕಡೆಯಿಂದ ಸರ್ಕಾರದ ವಿವಿಧ ಇಲಾಖೆಯ ಸೀಲು, ದಾಖಲೆಗಳನ್ನು ವಿನಯ್ಕುಮಾರ್ ಮಾಡಿಸಿಕೊಂಡಿದ್ದ. ಆ ದಾಖಲೆಗಳನ್ನೇ ಮುಂದಿಟ್ಟುಕೊಂಡು 3 ಸೈಟ್ಗಳ ಮಾರಾಟಕ್ಕೆ ಸಿದ್ಧತೆ ನಡೆದಿತ್ತು. ಅಷ್ಟೊತ್ತಿಗೆ ಬಿ ಖಾತಾ ನೋಂದಣಿ ರದ್ದಾದ ಹಿನ್ನೆಲೆಯಲ್ಲಿ ಮಾರಾಟ ಪ್ರಕ್ರಿಯೆ ಕೈಬಿಟ್ಟಿದ್ದರು. ಇದೇ ರೀತಿ ಬಾಗಲಗುಂಟೆಯ ಎಂಇಐ ಲೇಔಟ್ನ 1 ನಿವೇಶನವನ್ನು ಮಾಲೀಕ ಮರಣ ಹೊಂದಿರುವುದಾಗಿ ನಕಲಿ ಡೆತ್ ನೋಟ್ ಸೃಷ್ಟಿಸಿ ಮಾರಾಟಕ್ಕೆ ಮುಂದಾಗಿದ್ದರು. ಆಗ ಮಾಲೀಕ ಜೀವಂತವಾಗಿ ಇರುವ ವಿಚಾರ ತಿಳಿದು ಸುಮ್ಮನಾಗಿದ್ದರು ಎಂದು ರಮೇಶ್ ಬನೋತ್ ತಿಳಿಸಿದ್ದಾರೆ.
71 ಸರ್ಕಾರಿ ಸೀಲುಗಳು ಪತ್ತೆ: ಆರೋಪಿ ವಿನಯ್ಕುಮಾರ್ ಬಳಿ ಸರ್ಕಾರದ 71 ಇಲಾಖೆಗಳ ಸೀಲುಗಳು, ನಂಬರಿಂಗ್ ಮಿಷನ್, ಖಾಲಿ ಛಾಪಾಕಾಗದ, ಕಂದಾಯ ಇಲಾಖೆಯ ಫಾರಂ, ಖಾಲಿ ಮರಣ-ಜನನ ಪ್ರಮಾಣಪತ್ರಗಳು, ವಾಸಸ್ಥಳ ದೃಢೀಕರಣಕ್ಕೆ ಸಲ್ಲಿಸುವ ಅರ್ಜಿಗಳು ಪತ್ತೆಯಾಗಿವೆ. ಜತೆಗೆ ಆಶ್ರಯ ಯೋಜನೆಯ ಸೈಟ್ಗಳ ಹಕ್ಕುಪತ್ರಗಳು, ಶಾಲಾ ವರ್ಗಾವಣೆ ಪ್ರಮಾಣಪತ್ರ, ಲಕ್ಷ್ಮೀಪುರ ಧರಿತ್ರಿ ಲೇಔಟ್ನ ವಿವಿಧ ಶಾಲೆಗಳು, ಎಂಇಐ ಗೃಹ ನಿರ್ಮಾಣ ಸಹಕಾರಿ ಸಂಘದ ಸೈಟ್ಗೆ ಸಂಬಂಧಿಸಿದ ದಾಖಲೆಗಳು, ಟ್ರೇಸಿಂಗ್ ಶೀಟುಗಳು, ಬೆಂಗಳೂರು ಜಿಪಂ ರಸೀದಿ ಪುಸ್ತಕಗಳು ಪತ್ತೆಯಾಗಿವೆ ಎಂದು ರಮೇಶ್ ಬನೋತ್ ತಿಳಿಸಿದ್ದಾರೆ.