ಮಧ್ಯಮ ವರ್ಗದವರಿಗೆ ಸೈಟ್​ ಖರೀದಿ ಆಸೆಗೆ ತಣ್ಣೀರು?

Site 30 april 20
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕರೊನಾ ಕಾರಣಕ್ಕೆ ಉಂಟಾಗಿರುವ ಹಣಕಾಸು ನಷ್ಟವನ್ನು ಸರಿದೂಗಿಸಿಕೊಳ್ಳಲು ರಾಜ್ಯ ಸರ್ಕಾರ ಚಿತ್ತ ಹರಿಸಿದೆ. ನಗರ ಪಾಲಿಕೆ, ಮಹಾನಗರ ವ್ಯಾಪ್ತಿಯಲ್ಲಿನ ಕಂದಾಯ ನಿವೇಶನಗಳಿಗೂ ಇನ್ನುಮುಂದೆ ಬಿಡಿಎ, ಬಿಎಂಆರ್​ಡಿಎ ಸೇರಿ ನಗರಾಭಿವೃದ್ಧಿ ಸಂಸ್ಥೆಗಳು ನಿಗದಿಪಡಿಸಿರುವ ನೋಂದಣಿ ಶುಲ್ಕವನ್ನು ಪಡೆಯಲು ಆದೇಶಿಸಿದೆ.

ನಗರಪಾಲಿಕೆ ವಾಪ್ತಿಯಲ್ಲಿ ಇದ್ದರೂ ಯಾವುದೇ ಮೂಲಸೌಕರ್ಯ ಇಲ್ಲದ ಕಂದಾಯ ನಿವೇಶನಗಳನ್ನು ಖರೀದಿಸುವ ಸಾಮಾನ್ಯ ಜನರು ಮನೆ ಕಟ್ಟುವ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಇದೀಗ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆಗೊಂಡಷ್ಟೇ ಮಾರ್ಗಸೂಚಿ ದರದಲ್ಲಿ ನೋಂದಣಿ ಮಾಡುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ನಿವೇಶನದ ದರ ಶೇ.40-80 ಹೆಚ್ಚಳವಾಗಲಿದೆ. ಆದರೆ, ಮಧ್ಯಮ ವರ್ಗದವರು ಸೈಟ್ ಖರೀದಿಗೆ ಹಿಂದೇಟು ಹಾಕುವುದರಿಂದ ಸರ್ಕಾರಕ್ಕೆ ಆದಾಯಕ್ಕಿಂತ ನಷ್ಟವೇ ಹೆಚ್ಚು ಎಂಬ ಅಭಿಪ್ರಾಯವೂ ಇದೆ.

ಕಾವೇರಿ ವೆಬ್​ಸೈಟ್​ನಲ್ಲಿ ಅಪ್​ಡೇಟ್: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ವೆಬ್​ಸೈಟ್ ತಿರುಚಿದ ಆರೋಪದ ಮೇಲೆ ಸಿಸಿಬಿಗೆ ದೂರು ನೀಡಲಾಗಿತ್ತು. 2019ರ ಅಕ್ಟೋಬರ್​ನಲ್ಲಿ ಕಂದಾಯ ನಿವೇಶನಗಳ ನೋಂದಣಿ ಸಹ ನಿಲ್ಲಿಸಲಾಗಿತ್ತು. ಇದೀಗ ಎಲ್ಲ ಉಪನೋಂದಣಾಧಿಕಾರಿಗಳಿಗೆ ಜ್ಞಾಪನಾ ಪತ್ರ ಬರೆದಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ (ಹಿಂದಿನ) ಕೆ.ವಿ. ತ್ರಿಲೋಕ್​ಚಂದ್ರ, ಬಿಡಿಎ, ಬಿಎಂಆರ್​ಡಿಎ ಇನ್ನಿತರ ಪ್ರಾಧಿಕಾರಗಳಿಂದ ಅನುಮೋದಿತ ಮತ್ತು ಅಭಿವೃದ್ಧಿಪಡಿಸಿದ ಸೈಟುಗಳ ಮಾರ್ಗಸೂಚಿ ದರದಲ್ಲಿ ನೋಂದಣಿಗೆ ತಿಳಿಸಿದ್ದಾರೆ. ಈಗಾಗಲೇ ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ದರಗಳನ್ನು ತೆಗೆದುಹಾಕಿ ಅದೇ ಪ್ರದೇಶದ ಅನುಮೋದಿತ ನಿವೇಶನಗಳ ಮಾರ್ಗಸೂಚಿ ದರವನ್ನು

ಕಾವೇರಿ ಪೋರ್ಟಲ್​ನಲ್ಲಿ ಅಪ್​ಡೇಟ್ ಮಾಡಿ ಎಂದು ಸೂಚನೆ ನೀಡಿದ್ದಾರೆ. ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಲಾಗದೆ ಕಂದಾಯ ನಿವೇಶನಗಳ ಮೊರೆಹೋಗುತ್ತಿದ್ದವರು ಇದರಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

ಬೊಕ್ಕಸಕ್ಕೂ ನಷ್ಟ?: ಕಂದಾಯ ನಿವೇಶನಗಳನ್ನು ಕಡಿಮೆ ಮಾರ್ಗಸೂಚಿ ದರಕ್ಕೆ ನೋಂದಣಿ ಮಾಡುತ್ತಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟ ಸರಿದೂಗಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಹೆಚ್ಚಿನ ಮಾರ್ಗಸೂಚಿ ದರಕ್ಕೆ ನೋಂದಣಿ ಮಾಡುವುದರಿಂದ ಆದಾಯ ಹೆಚ್ಚುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ. ಆದರೆ ಈಗಾಗಲೆ ಅನೇಕ ಪ್ರದೇಶದಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತಲೂ ಮಾರ್ಗಸೂಚಿ ದರ ಹೆಚ್ಚಿದೆ. ಕಡಿಮೆ ದರಕ್ಕೆ ನಿವೇಶನ ಖರೀದಿಸಿದರೂ ಮಾರ್ಗಸೂಚಿ ದರಕ್ಕೆ ನೋಂದಣಿ ಮಾಡುತ್ತಿದ್ದಾರೆ. ಇದೀಗ ಅನುಮೋದಿತ ನಿವೇಶನಗಳ ಲೆಕ್ಕದಲ್ಲಿ ಶುಲ್ಕ ಪಾವತಿಸಿದರೆ ಮಾರುಕಟ್ಟೆ ಮೌಲ್ಯ ಹಾಗೂ ಮಾರ್ಗಸೂಚಿ ದರದ ಅಂತರ ಹೆಚ್ಚಾಗುತ್ತದೆ. ಜತೆಗೆ, ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ತಪ್ಪಿದಲ್ಲಿ ಐಟಿ ಕಾಯ್ದೆ-1961 ಸೆಕ್ಷನ್ 50(ಸಿ)ರಡಿ ಮಾರಾಟಗಾರ ಮತ್ತು ಖರೀದಿಗಾರನಿಗೆ ನೋಟಿಸ್ ಬರಲಿದೆ. ಆಗ ಇಬ್ಬರೂ ಆದಾಯ ಘೋಷಣೆ ಮಾಡಿಕೊಂಡು ತೆರಿಗೆ ಪಾವತಿಸಬೇಕಾಗುತ್ತದೆ.

ಹೆಚ್ಚಿನ ಜನರು ನಿವೇಶನ ಖರೀದಿಯಿಂದ ಹಿಂದೆ ಬೀಳುವ ಕಾರಣಕ್ಕೆ ಸರ್ಕಾರದ ಬೊಕ್ಕಸಕ್ಕೆ ನಷ್ಟವೇ ಆಗುತ್ತದೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ಮೂಲಸೌಕರ್ಯಗಳ ಕೊರತೆ

ಸ್ಥಳೀಯ ಸಂಸ್ಥೆಗಳ ಆಧಾರದ ಮೇಲೆ ರೆವಿನ್ಯೂ ಸೈಟ್​ಗಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ನಿಗದಿಪಡಿಸಲಾಗುತ್ತಿತ್ತು. ಕಂದಾಯ ನಿವೇಶನದ ಲೇಔಟ್​ಗಳಲ್ಲಿ ರಸ್ತೆ, ಪಾರ್ಕ್, ವಿದ್ಯುತ್ ಸಂಪರ್ಕ, ನೀರು ಸೇರಿ ಹಲವು ಮೂಲಸೌಕರ್ಯಗಳು ಇರುತ್ತಿರಲಿಲ್ಲ. ಇದನ್ನೆಲ್ಲ ಪರಿಗಣಿಸಿ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಇದೀಗ ಬಿಡಿಎ, ಬಿಎಂಆರ್​ಡಿಎ ಸೇರಿ ಸಕ್ಷಮ ಪ್ರಾಧಿಕಾರದ ನಿವೇಶಗಳ ಮಾರ್ಗಸೂಚಿ ದರವನ್ನೇ ರೆವಿನ್ಯೂ ಸೈಟ್​ಗೂ ವಿಧಿಸುವಂತೆ ಸೂಚಿಸಿರುವುದು ಎಷ್ಟು ಸರಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net