ನಿವೇಶನ ಖರೀದಿಸಿ ಸರ್ಕಾರಿ ಶಾಲೆಗೆ ದಾನ

20LNG03
Published on

ಲಿಂಗಸುಗೂರು: ಶಾಲೆಯೇ ಶಿವಾಲಯ, ಮಕ್ಕಳೇ ದೇವರು ಎಂಬ ಮಾತಿಗೆ ಪೂರಕವಾಗಿ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಶಾಲೆಗೆ ಹೊಂದಿಕೊಂಡಿದ್ದ ಖಾಸಗಿ ನಿವೇಶನ ಖರೀದಿಸಿ ಸರ್ಕಾರಕ್ಕೆ ದಾನ ನೀಡಿದ್ದಾರೆ. ಈ ಮೂಲಕ ಲಿಂಗಸುಗೂರು-ರಾಯಚೂರು ಮಾರ್ಗದಲ್ಲಿರುವ ಕುಪ್ಪಿಗುಡ್ಡ ಗ್ರಾಮಸ್ಥರು ಮಾದರಿ ಕಾರ್ಯ ಕೈಗೊಂಡಿದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಒಟ್ಟು 81 ಮಕ್ಕಳಿದ್ದಾರೆ. ಶಾಲೆಯಲ್ಲಿನ ಏಳು ಕೊಠಡಿಗಳ ಪೈಕಿ ಮೂರು ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಕೊಠಡಿಗಳ ಅಭಾವದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಜಾಗದ ಕೊರತೆಯಿಂದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ಕುರಿತ ಮಾಹಿತಿಯನ್ನು ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಶಿಕ್ಷಕರು ಗ್ರಾಮಸ್ಥರ ಗಮನಕ್ಕೆ ತಂದರು.

ಗ್ರಾಮಸ್ಥರು ಕಳೆದ ಜನವರಿಯಲ್ಲಿ ಸಭೆ ನಡೆಸಿ ಶಾಲೆಗೆ ಹೊಂದಿಕೊಂಡಿರುವ ಖಾಸಗಿ ನಿವೇಶನ ಖರೀದಿಸಲು ಮುಂದಾದರು. ಈ ಹಿನ್ನೆಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಒಳಗೊಂಡು ಗ್ರಾಮದ ಪ್ರಮುಖರಾದ ವೀರೇಶ ಮುದ್ನೋರ್, ದೇವಣ್ಣ ನೆಲೋಗಿ, ಹನುಮಂತ್ರಾಯ ನೆಲೋಗಿ, ಸಾಬಣ್ಣ, ಮಾಧವ ನೆಲೋಗಿ, ಬಾಲಪ್ಪ ಮಾನಮಟ್ಟಿ, ಅಯ್ಯನಗೌಡ ಪಾಟೀಲ್ ಇತರರ ಸಮಿತಿ ರಚಿಸಿ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಿದರು.

1620 ಚರದಡಿಯ ನಿವೇಶ ಖರೀದಿಗೆ ಪ್ರಯತ್ನ ಆರಂಭವಾಯಿತು. ಖಾಸಗಿ ನಿವೇಶನದ ಮಾಲೀಕರಾದ ಯಮುನಾ ಅಮರೇಶ ಯಾದಗಿರಿ ಅವರನ್ನು ಸಂಪರ್ಕಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಮಾಲೀಕರ ಮನವೊಲಿಸಿ ಗ್ರಾಮಸ್ಥರಿಂದ ಸಂಗ್ರಹವಾದ 5.50 ಲಕ್ಷ ರೂ. ದೇಣಿಗೆಯಲ್ಲಿ 5 ಲಕ್ಷ ರೂ.ಗೆ ಖಾಲಿ ನಿವೇಶನ ಖರೀದಿಸಿದರು. ಉಳಿದ 50 ಸಾವಿರ ರೂ. ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದರು.

ಬಳಿಕ ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಶಿಕ್ಷಕರ ಗಮನಕ್ಕೆ ತಂದು ಅ.15 ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್ ನೇತೃತ್ವದಲ್ಲಿ ಸ್ಥಳೀಯ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ರಾಜ್ಯಪಾಲರ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಿನಲ್ಲಿ ನಿವೇಶನ ನೊಂದಣಿ ಮಾಡಿಸಲಾಯಿತು.

ನೋಂದಣಿ ಸಮಯದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಚನ್ನಬಸವ ಮೇಟಿ, ಶಿಕ್ಷಣ ಸಂಯೋಜಕ ಬಸವರಾಜ ಕರಡಿ, ಮುಸ್ತಾಫ, ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ಮುದ್ನೂರು, ಮುಖ್ಯಶಿಕ್ಷಕಿ ಕಾಶಿಬಾಯಿ, ಶಿಕ್ಷಕ ಮಲ್ಲಿಕಾರ್ಜುನ ವೀರಾಪುರ, ಸಣ್ಣ ಅಮರಣ್ಣ, ಹನುಮಂತ್ರಾಯ ನೆಲೋಗಿ, ಕುಬೇರಪ್ಪ ಚಲವಾದಿ, ಸುಭಾಶ್ಚಂದ್ರ, ಅಮರೇಶ ಮಿಣಜಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net