

ವಿಜಯಪುರ:ನಗರದಲ್ಲಿರುವ ಐತಿಹಾಸಿಕ ತಾಜ್ ಬಾವಡಿ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.ಅಡಾಪ್ಟ್ ಎ ಮೊನೊಮೆಂಟ್ ಯೋಜನೆಯಡಿ ತಾಜ್ ಬಾವಡಿ ಸ್ಮಾರಕವನ್ನು ವರ್ಲ್ಡ್ ಮಾನ್ಯುಮೆಂಟ್ ಫಂಡ್ ಇಂಡಿಯಾ ಅಸ್ಸೊಸಿಯೆಷನ್ಸ್ ಮುಂಬೈ ಸಂಸ್ಥೆಯವರು ದತ್ತು ಪಡೆದಿದ್ದು, ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲ ಸೌಕರ್ಯಗಳು, ಸೌಂದರೀಕರಣ ಹಾಗೂ ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶಿ&ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಹಲವು ಯೋಜನೆ ರೂಪಿಸಲು ನಿರ್ಧರಿಸಿದ್ದಾರೆ ಎಂದರು.
ತಾಜ್ ಬಾವಡಿ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲು ಡಿಸಿ ಸೂಚನೆ ನೀಡಿದರು. ಕಲುಷಿತ ನೀರು ಬಾವಡಿ ಸೇರದಂತೆ ಅಗತ್ಯ ಕ್ರಮವಹಿಸುವುದು. ಡಿಸೆಂಬರ್ ತಿಂಗಳಿನೊಳಗೆ ನೀರನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸಲು ಒದಗಿಸಬೇಕು. ಬಾವಡಿಯ ಆವರಣದಲ್ಲಿರುವ ವಿದ್ಯುತ್ ಪರಿವರ್ತಕ ಬೇರೆಡೆ ಸ್ಥಳಾಂತರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಿಕಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಅರವಿಂದ ಹೂಗಾರ, ವರ್ಲ್ಡ್ ಮಾನ್ಯುಮೆಂಟ್ ಫಂಡ್ ಇಂಡಿಯಾ ಅಸ್ಸೊಸಿಯೆಷನ್ಸ್ ಸಂಸ್ಥೆಯ ಅನಾಬೇಲ್ ಲೋಪೆಜ್, ಪದಾಧಿಕಾರಿಗಳಾದ ಬಿ. ಶರತಚಂದ್ರ ಮತ್ತಿತರರಿದ್ದರು.
ವಿಜಯಪುರ ನಗರದ ಐತಿಹಾಸಿಕ ಸ್ಮಾರಕ ತಾಜಬಾವಡಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಕುಮಾರ ಮೆಕ್ಕಳಿಕಿ, ಅರವಿಂದ ಹೂಗಾರ, ಅನಾಬೇಲ್ ಲೋಪೆಜ್ ಮತ್ತಿತರರಿದ್ದಾರೆ.