

ಔರಾದ್: ದಾಬಕಾ ಹೋಬಳಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ವಸತಿ ಶಾಲೆ ನಿರ್ಮಿಸಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬಯಕೆಯಂತೆ ಚಿಮ್ಮೆಗಾಂವ ಗ್ರಾಮದಲ್ಲಿ ಶಾಲೆ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ತಾಲೂಕಿನ ಚಿಮೆಗಾಂವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಿರ್ಮಾಣದ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಶಾಲೆ ನಿರ್ಮಾಣಕ್ಕೆ ಸತತ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ದಾಬಕಾದಲ್ಲಿ ಜಮೀನು ಲಭ್ಯವಿಲ್ಲದ ಕಾರಣ ವಿಳಂಬವಾಗಿದೆ. ಚಿಮ್ಮೆಗಾಂವದಲ್ಲಿ ಜಮೀನು ಒದಗಿಸಿದ ನಂತರ ವಸತಿ ಶಾಲೆಗೆ ಅನುದಾನ ಒದಗಿಸಬೇಕೆಂದು ಸರ್ಕಾರದ ಮೇಲೆ ನಿರಂತರ ಪ್ರಯತ್ನದ ಫಲವಾಗಿ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ೧೦ ಎಕರೆ ಜಮೀನಿನಲ್ಲಿ ೨೨ ಕೋಟಿ ರೂ.ವೆಚ್ಚದ ಭವ್ಯವಾದ ವಸತಿ ಶಾಲೆ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.
ಇದರಿಂದ ದಾಬಕಾ ಹಾಗೂ ಏಕಂಬಾ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ. ಡಾ.ಅಂಬೇಡ್ಕರ್ ಆಶಯದಂತೆ ಶಿಕ್ಷಣದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದು, ಎಲ್ಲ ಭಾಗಗಳಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ.ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಬಲ್ಲೂರ(ಜೆ), ಚಿಂತಾಕಿ, ಹೊರಂಡಿ ಗ್ರಾಮಗಳಲ್ಲಿ ವಸತಿ ಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ ಎಂದು ಹೇಳಿದರು.
ಕಮಲನಗರ ತಹಸೀಲ್ದಾರ್ ಅಮೀತಕುಮಾರ ಕುಲಕರ್ಣಿ, ಮುಖಂಡರಾದ ಅನಿಲ ಬಿರಾದಾರ, ಧೊಂಡಿಬಾಯಿ ವಿಲಾಸ, ಸಂಜು ಪಾಟೀಲ್, ಜ್ಞಾನದೇವ ಬಿರಾದಾರ, ಸಚಿನ ಬಿರಾದಾರ, ಕಿಶೋರ ಪಾಟೀಲ್, ಯಶವಂತ ಪಾಟೀಲ್, ರಮೇಶ ಪಾಟೀಲ್, ನಾರಾಯಣ ಮುಳೆ ಮತ್ತು ಗ್ರಾಮದ ಮುಖಂಡರು ಇದ್ದರು.