ಬಿ.ಹೊಸೂರು ಕಾಲನಿಯಲ್ಲಿ ಹಾಸ್ಟೆಲ್ ನಿರ್ಮಾಣ: ಶಾಸಕ ರವಿಕುಮಾರ್ ಗಣಿಗ, ಡಿಸಿ ಡಾ.ಕುಮಾರ ಪರಿಶೀಲನೆ

Site inspection for hostel construction Mandya
Published on

ಮಂಡ್ಯ: ಹಲವು ಶೈಕ್ಷಣಿಕ ಸಂಸ್ಥೆ ಹಾಗೂ ಆರೋಗ್ಯ ಕೇಂದ್ರದಿಂದಾಗಿ ಗುರುತಿಸಿಕೊಂಡಿರುವ ತಾಲೂಕಿನ ಬಿ.ಹೊಸೂರು ಕಾಲನಿಯಲ್ಲಿ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಜಾಗ ಗುರುತಿಸಲು ಶಾಸಕ ರವಿಕುಮಾರ್ ಗಣಿಗ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಕೆರಗೋಡು-1ನೇ ಹೋಬಳಿಯ ಬಿ.ಹೊಸೂರು ಕಾಲನಿಯಲ್ಲಿ ಖಾಲಿ ಇರುವ ಸರ್ಕಾರಿ ಗೋಮಾಳದಲ್ಲಿ 2 ಎಕರೆ 13 ಗುಂಟೆ ಜಾಗವನ್ನು ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ನಿರ್ಮಾಣಕ್ಕಾಗಿ ಕಾಯ್ದಿರಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಗೋಮಾಳ ಜಾಗವನ್ನು ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕಾಯ್ದಿರಿಸಲಾಗಿದ್ದು, 20 ಗುಂಟೆಯನ್ನು ರಸ್ತೆಗೆ ಕಾಯ್ದಿರಿಸುವ ಬಗ್ಗೆ ಆರ್‌ಟಿಸಿ ಹಾಗೂ ನಕಾಶೆಯಲ್ಲಿ ಇಂಡೀಕರಣ ಮಾಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ನಿರ್ವಹಣೆಯಾಗುತ್ತಿರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗಳು ರಾಜ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದೆ. ಉಚಿತವಾಗಿ ಶಿಕ್ಷಣವನ್ನು ನೀಡುವುದರ ಜತೆಗೆ ಮಕ್ಕಳಲ್ಲಿ ನೈತಿಕತೆ, ಸಧೃಡತೆ ಹಾಗೂ ಸ್ವಾವಲಂಬನೆಯನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಈ ಶಾಲೆಗಳು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಖಾಸಗಿ ಶಾಲೆಗಳಿಗೆ ಸಮನಾಗಿ ಪೈಪೋಟಿ ಕೊಡುತ್ತಿವೆ. ಈ ಮೂಲಕ ರಾಜ್ಯದಲ್ಲಿ ಉತ್ತಮ ಫಲಿತಾಂಶ ನೀಡುವಲ್ಲಿ ಶ್ರಮಿಸುತ್ತಿವೆ. ಇಂತಹ ಶಾಲೆಗಳನ್ನು ನಿರ್ಮಾಣ ಮಾಡುವುದು ಜಿಲ್ಲಾಡಳಿತದ ಗುರುತರದ ಜವಬ್ದಾರಿಯಾಗಿದ್ದು, ಜನಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡುತ್ತಿರುವುದು ಪ್ರಗತಿಗೆ ಪೂರಕವಾಗಿರುತ್ತದೆ ಎಂದರು.

ತಹಸೀಲ್ದಾರ್ ವಿಶ್ವನಾಥ್, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net