

ಹಳಿಯಾಳ: ಪಟ್ಟಣದ ಸಕ್ಕರೆ ಕಾರ್ಖಾನೆಯ ಹೊರಭಾಗದಲ್ಲಿ ಡಿಜಿಟಲ್ ತೂಕ ಯಂತ್ರ ಸ್ಥಾಪನೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಕಬ್ಬು ಬೆಳೆಗಾರ ಸಂಘಟನೆಯ ಪ್ರಮುಖರು ಸೋಮವಾರ ಸ್ಥಳ ಪರಿಶೀಲಿಸಿದರು. ಕಾರ್ಖಾನೆ ಒಳಗೆ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು.
ಪಟ್ಟಣದ ಪ್ಯಾರಿ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಆಹಾರ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುನಾಥ ರೇವಣಕರ ಹಾಗೂ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣವರ, ಡಿವೈಎಸ್ಪಿ ಶಿವಾನಂದ ಮದರಖಂಡಿ ನೇತೃತ್ವದಲ್ಲಿ ಸ್ಥಳ ನಿಯುಕ್ತಿ ಮತ್ತು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಿತು.
ತೂಕದ ಯಂತ್ರವನ್ನು ಹೊರಗೆ ಅಳವಡಿಸಲು ನಿರ್ದೇಶನವಿದ್ದರೂ ಕಾರ್ಖಾನೆಗಳಿಂದ ಸ್ಪಂದನೆ ದೊರೆಯುತ್ತಿಲ್ಲ ಎಂದು ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲಾ ರೈತ ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಖಾನೆಯ ಹೊರಭಾಗದ ರಸ್ತೆಯಂಚಿನ ಸೂಕ್ತ 100 ಮೀಟರ್ ಸ್ಥಳ ಗುರುತಿಸಿ ಡಿಜಿಟಲ್ ಯಂತ್ರ ಅಳವಡಿಸಬೇಕು ಎಂದು ಆಗ್ರಹಿಸಿದರು.
ನಾಗೇಂದ್ರ ಜಿವೋಜಿ ಹಾಗೂ ಸಂದೀಪ ಕುಮಾರ ಬೊಬಾಟಿ ಮಾತನಾಡಿ, ಕಾರ್ಖಾನೆಯವರು ಒಂದು ರೂಪಾಯಿ ಖರ್ಚು ಮಾಡುವ ಅವಶ್ಯಕತೆಯಿಲ್ಲ. ಸರ್ಕಾರವೇ 80 ಲಕ್ಷ ರೂ. ಅನುದಾನ ಘೋಷಿಸಿದೆ. ಹೀಗಿದ್ದಾಗ ಇದಕ್ಕೂ ತಗಾದೆ ತೆಗೆಯುವ ಕಾರ್ಖಾನೆ ಆಡಳಿತ ಮಂಡಳಿಯ ಮಾನಸಿಕತೆಗೆ ಏನೆನ್ನಬೇಕು ಎಂದು ಕಿಡಿಕಾರಿದರು.
ಸಭೆಗೆ ಉತ್ತರ ಕನ್ನಡ ಜಿಲ್ಲೆಯ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿ ದೇವರಾಜ್ ಆಗಮಿಸದಿರುವುದು ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ಈ ಹಿಂದೆ ನಡೆದ ಸಭೆಗಳ ಮಾಹಿತಿ ಇಲ್ಲವೆಂದು ಹೇಳಿಕೆ ನೀಡಿದ್ದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು.
ಧಾರವಾಡ ಜಿಲ್ಲೆಯ ಕಬ್ಬು ಬೆಳೆಗಾರ ಸಂಘದ ಮಹೇಶ ಬೆಳಗಾಂವಕರ, ವಸಂತ ಡಾಕಪ್ಪನವರ, ಸಹದೇವಪ್ಪ ಕುಂಬಾರ, ಯಲ್ಲಪ್ಪ ತಳವಾರ, ಅಶೋಕ ಮೇಟಿ, ಪ್ರಕಾಶ ಫಾಕ್ರೆ, ಮಂಜುಳಾ ಗೌಡ, ಶಂಬಾಜಿ ಹಳಿಯಾಳಕರ, ರಾಮದಾಸ ಬೆಳಗಾಂವಕರ ಇತರರಿದ್ದರು.