

ಮೈಸೂರು: ರಾಜ್ಯದ ಎಲ್ಲ ಜಿಲ್ಲೆಯ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಶಾಶ್ವತ ಯೂನಿಟಿ ಮಾಲ್ ನಿರ್ಮಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಯೂನಿಟಿಮಾಲ್ ನೀಲನಕ್ಷೆಯನ್ನು ವೀಕ್ಷಿಸಿದ ಸಚಿವದ್ವಯರು, ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಯುನಿಟ್ ಮಾಲ್‌ಗೆ ಗುರುತಿಸಲಾಗಿರುವ 6.5 ಎಕರೆ ಜಾಗದಲ್ಲಿ ವ್ಯವಸ್ಥಿತವಾಗಿ ಕಟ್ಟಡ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಯುನಿಟಿ ಮಾಲ್‌ನಲ್ಲಿ ರಾಜ್ಯದ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ಜತೆಗೆ ಪಾರಂಪರಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ತಾಣವಾಗಿ ರೂಪಿಸಲಾಗುವುದು. ಒಂದು ಜಿಲ್ಲೆ ಒಂದು ಉತ್ಪನ್ನ ಹಾಗೂ ಕರಕುಶಲ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯುನಿಟಿ ಮಾಲ್‌ಅನ್ನು ನಿರ್ಮಿಸಬೇಕು ಸಚಿವ ಮಹದೇವಪ್ಪ ಸೂಚನೆ ನೀಡಿದರು.
ಮೈಸೂರಿಗೆ ಆಗಮಿಸುವ ದೇಶ ಹಾಗೂ ವಿದೇಶಗಳ ಪ್ರವಾಸಿಗರನ್ನು ಯೂನಿಟಿ ಮಾಲ್ನತ್ತ ಆಕರ್ಷಿಸಬೇಕು. ಅತ್ಯುತ್ತಮವಾದ ಆಹಾರ ಕೇಂದ್ರ, ಆಟದ ಸ್ಥಳಗಳು, ಮನರಂಜನಾ ಕೇಂದ್ರಗಳು, ಶಿಶುವಿಹಾರ ಒಳಗೊಂಡಿರಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಜಿ. ಗೌಡ ಇದ್ದರು.