

ಬೇಲೂರು: ಪಟ್ಟಣದ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಬಸ್‌ಗಳ ನಿಲುಗಡೆ ಹಾಗೂ ಓಡಾಟಕ್ಕೆ ಸ್ಥಳಾವಕಾಶದ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ನೂತನವಾಗಿ ಹೈಟೆಕ್ ಮಾದರಿ ಬಸ್ ನಿಲ್ದಾಣ ನಿರ್ಮಿಸುವುದಕ್ಕಾಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಹೊಸ ನಗರ ಬಡಾವಣೆ ಸಮೀಪ ಶಾಸಕ ಎಚ್.ಕೆ.ಸುರೇಶ್ ಜತೆಗೆ ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳ ತಂಡ ಗುರುವಾರ ಸ್ಥಳ ಪರಿಶೀಲಿಸಿದರು.
ಸ್ಥಳ ಪರಿಶೀಲಿಸಿದ ಬಳಿಕ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಬೇಲೂರು ಪಟ್ಟಣದಲ್ಲಿರುವ ಶ್ರೀ ಚನ್ನಕೇಶವಸ್ವಾಮಿ ದೇಗುಲ ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿದ ವಿಶ್ವವಿಖ್ಯಾತ ಪ್ರವಾಸಿ ತಾಣ. ಇಲ್ಲಿಗೆ ದೇಶ-ವಿದೇಶಗಳಿಂದ ಮತ್ತು ರಾಜ್ಯದ ವಿವಿಧ ಬಾಗಗಳಿಂದ ಪ್ರವಾಸಿಗರು, ಸ್ಥಳೀಯರು ಬಸ್‌ಗಳಲ್ಲಿ ಬಂದು ಹೋಗುತ್ತಾರೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ಆದರೆ ಪಟ್ಟಣದಲ್ಲಿರುವ ಬಸ್ ನಿಲ್ದಾಣ ಚಿಕ್ಕದಾಗಿದ್ದು, ಬಸ್‌ಗಳ ನಿಲುಗಡೆ ಮತ್ತು ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಸ್ ನಿಲ್ದಾಣವನ್ನು ವಿಸ್ತರಿಸಬೇಕು ಇಲ್ಲವೇ ಸ್ಥಳಾಂತರಿಬೇಕೆಂಬ ನಿಟ್ಟಿನಲ್ಲಿ ಪಟ್ಟಣ ಸಮೀಪದ ಹಾಸನ ರಸ್ತೆಯ ಎಪಿಎಂಸಿ ಮತ್ತು ಹೊಸನಗರ ಬಡಾವಣೆ ಸಮೀಪದಲ್ಲಿರುವ ಜಾಗವನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದ್ದೇವೆ. ಈಗ ನಗರಾಭಿವೃದ್ಧಿ ಇಲಾಖೆಯಿಂದ ನೂತನ ಬಸ್ ನಿಲ್ದಾಣಕ್ಕೆ 5 ಕೋಟಿ ರೂ. ಅನುದಾನ ಕೊಡಲು ಸರ್ಕಾರ ಮುಂದಾಗಿದೆ. ಪ್ರವಾಸಿ ತಾಣಕ್ಕೆ ತಕ್ಕಂತೆ ಹೈಟೆಕ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿ ಬಳಿ ಪ್ರಸ್ತಾವನೆ ಸಲ್ಲಿಸಿದ್ದು, ಅಲ್ಲಿಂದ ಅನುಮೋದನೆ ಸಿಕ್ಕ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್‌ಸ್ವಾಮಿ, ಕಿರಿಯ ಇಂಜಿನಿಯರ್ ಅರವಿಂದ್ ಸೇರಿದಂತೆ ಇತರರಿದ್ದರು.