ಸೈಟ್ ಖರೀದಿ ನೆಪದಲ್ಲಿ ವಂಚನೆ: ಸಿಇಎನ್ ಪೊಲೀಸರಿಂದ ಆರೋಪಿ ಸೆರೆ

site fraud case
Published on

ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಸೈಟು, ಮನೆ ಮಾರಾಟದ ಜಾಹೀರಾತು ನೀಡಿರುವ ವಾರಸುದಾರರಿಗೆ ಕರೆ ಮಾಡಿ ಖರೀದಿಸುವ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ದೇವರೆಂಟಿ ವಿನೋದ್ ಕುಮಾರ್ ರೆಡ್ಡಿ(38) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್ ಜಪ್ತಿ ಮಾಡಿರುವುದಾಗಿ ಈಶಾನ್ಯ ವಿಭಾಗ ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.

7ನೇ ತರಗತಿ ಓದಿ ಆನಂತರ ದೂರ ಶಿಕ್ಷಣ ಇಲಾಖೆಯಿಂದ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದ ವಿನೋದ್, ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ನೆಲೆಸಿದ್ದ. 2 ವರ್ಷಗಳಿಂದ ಕುಟುಂಬದಿಂದ ದೂರವಾಗಿ ಪತ್ನಿ ಜೊತೆಗೆ ವಿಚ್ಛೇದನ ಕೋರಿ ಕೋರ್ಟ್ ಮೇಟ್ಟಿಲೇರಿದ್ದಾನೆ.

ಮತ್ತೊಂದೆಡೆ ಸಾರ್ವಜನಿಕರಿಗೆ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಗೋವಾದಲ್ಲಿ ಸುತ್ತಾಡಿಕೊಂಡು ಜನರಿಗೆ ಮೋಸ ಮಾಡಿಕೊಂಡು ಹೋಟೆಲ್‌ನಲ್ಲಿ ಉಳಿದುಕೊಂಡು ಶೋಕಿ ಜೀವನ ನಡೆಸುತ್ತಿದ್ದ.‘

ಸಾರ್ವಜನಿಕರು ಒಎಲ್‌ಎಕ್ಸ್‌ನಲ್ಲಿ ಸೈಟು, ಮನೆ, ಕಟ್ಟಡ ಮಾರಾಟಕ್ಕೆ ಜಾಹೀರಾತು ನೀಡುತ್ತಿದ್ದರು. ಇವರನ್ನೇ ಟಾರ್ಗೆಟ್ ಮಾಡಿ ವಿನೋದ್, ಜಾಹೀರಾತಿನಲ್ಲಿ ಇರುವ ಮೊಬೈಲ್ ನಂಬರ್‌ಗೆ ಕರೆ ಮಾಡಿ ಸೈಟ್ ಖರೀದಿ ಮಾಡುವುದಾಗಿ ಜಾಗದ ವಿಳಾಸ ಕೇಳಿಕೊಂಡು ಹೋಗುತ್ತಿದ್ದ.

ಸೈಟು, ಕಟ್ಟಡ ನೋಡಿದ ಮೇಲೆ ದಾಖಲೆ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಪಡೆದು ಆಸ್ತಿ ಮಾಲೀಕರಿಗೆ ಅನುಮಾನ ಬರದಂತೆ ನಾಟಕವಾಡಿ ಅವರ ಬ್ಯಾಂಕ್ ಖಾತೆ ವಿವರ ಮತ್ತು ಮೊಬೈಲ್ ನಂಬರ್ ಪಡೆಯುತ್ತಿದ್ದ. ಫೋನ್ ಪೇ, ಗೂಗಲ್ ಪೇನಲ್ಲಿ ಹಣ ಕಳುಹಿಸುವುದಾಗಿ ನಂಬಿಸುತ್ತಿದ್ದ.

ಆನಂತರ ಆಸ್ತಿ ಮಾಲೀಕರ ಮೊಬೈಲ್ ಲಾಕ್ ತೆಗೆಸಿ ಸಬೂಬು ಹೇಳಿ ಅವರಿಂದ ಫೋನ್ ಪಡೆದು ಅಲ್ಲಿಂದ ಪರಾರಿ ಆಗುತ್ತಿದ್ದ. ಇದೇ ರೀತಿ ಸೆಪ್ಟೆಂಬರ್ 30ರಂದು ಪೀಣ್ಯ ಇಂಜಿನಿಯರ್‌ಗೆ ಕರೆ ಮಾಡಿ ಸೈಟ್ ಖರೀದಿ ಮಾಡಲು ಇಚ್ಛಿಸಿರುವುದಾಗಿ ನಂಬಿಸಿದ್ದ. ಅವರ ಸೈಟ್ ಬಳಿಗೆ ಬಂದಾಗ ಅವರಿಂದ ಮೊಬೈಲ್ ಪಡೆದು ಅಲ್ಲಿಂದ ಪರಾರಿಯಾಗಿ 30 ನಿಮಿಷಗಳ ಒಳಗಾಗಿ 1.40 ಲಕ್ಷ ರೂ.ಅನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದ.

ಇತ್ತ ಇಂಜಿನಿಯರ್ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಇಂಜಿನಿಯರ್ ಮೊಬೈಲ್ ಸಹ ಕಳವಾಗಿತ್ತು. ಈ ಬಗ್ಗೆ ಇಂಜಿನಿಯರ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಶಿಕ್ಷೆ ಆಗಿದ್ದರೂ ಬಿಡಲಿಲ್ಲ: ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ವಿನೋದ್, ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ. ರಾಜ್ಯದ ಹುಬ್ಬಳ್ಳಿ, ಬಿಡದಿ ಠಾಣೆಯಲ್ಲಿ ಆರೋಪಿಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿವೆ. ಅಲ್ಲದೆ, ತಿಲಕನಗರ ಪೊಲೀಸರು, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದಿದ್ದ. ಇದಲ್ಲದೆ, ಪುತ್ತೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ವಿನೋದ್‌ಗೆ ಜೈಲು ಶಿಕ್ಷೆಯಾಗಿತ್ತು. ಜಾಮೀನು ಪಡೆದು ಹೊರಬಂದು ಮತ್ತೆ ಹಳೇ ಚಾಳಿ ಮುಂದುವರಿಸಿದ್ದ.

ಮೊಬೈಲ್ ಆನ್ ಮಾಡಿ ಸೆರೆಸಿಕ್ಕ: ಇಂಜಿನಿಯರ್ ಬಳಿ ಸೈಟ್ ಖರೀದಿಸುವ ನೆಪದಲ್ಲಿ 1.40 ಲಕ್ಷ ರೂ. ವಂಚನೆ ಮಾಡಿದ್ದ ಆರೋಪಿ ಮೊಬೈಲ್ ನಂಬರ್‌ಅನ್ನು ಸಿಇಎನ್ ಪೊಲೀಸರು, ಸಿಡಿಆರ್ ಪತ್ತೆಗೆ ಸೈಬರ್ ತಜ್ಞರ ಮೊರೆ ಹೋಗಿದ್ದರು. ಆರೋಪಿ ಮತ್ತೆ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶಕ್ಕೆ ಹಳೇ ನಂಬರ್ ಬಳಸಿದಾಗ ಆರೋಪಿಯ ಜಾಡು ಹಿಡಿದು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net