ಒಕ್ಕಲಿಗ ಸಮುದಾಯದ ಅವಹೇಳನ : ಕಾಂಗ್ರೆಸ್'ನಿಂದ ಸೀತಾರಾಮು 6 ವರ್ಷಗಳ ಕಾಲ ಉಚ್ಚಾಟನೆ

seetharam
Published on

ಮೈಸೂರು: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಜಿಲ್ಲಾ ವಕ್ತಾರ, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ಸೀತಾರಾಮ್ ಒಕ್ಕಲಿಗ ಸಮುದಾಯದ ಕುರಿತು ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಜನಾಕ್ರೋಶ ವ್ಯಕ್ತವಾಗಿತ್ತು. ಎಚ್.ಡಿ. ಕೋಟೆಯಲ್ಲಿ ಸೀತಾರಾಮ್ ವಿರುದ್ಧ ಒಕ್ಕಲಿಗರು ದೊಡ್ಡಮಟ್ಟದ ಪ್ರತಿಭಟನೆ ನಡೆಸಿ ಕ್ರಮಕ್ಕೆ ಒತ್ತಾಯಿಸಿದ್ದರು. ಸೀತಾರಾಮ್ ಅವರ ಮಾತು ಒಕ್ಕಲಿಗ ಸಮುದಾಯಕ್ಕೆ ನೋವುಂಟು ಮಾಡಿರುವುದು ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿಗೆ ಶಿಫಾರಸು ಮಾಡಿತ್ತು. ಈ ವಿಚಾರವನ್ನು ಪರಿಶೀಲಿಸಿದ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ಸೀತಾರಾಮ್ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net