

ಮಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ, ಎಸ್‌ಐಟಿಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಅವರು ಕಾನೂನುಬದ್ಧ ತನಿಖೆ ಮಾಡಲಿದ್ದಾರೆ ಎಂದು ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಕೇರಳ ವಿಧಾನಸಭಾ ಚುನಾವಣಾ ಹಿನ್ನೆಲೆ ಪಕ್ಷದ ಪ್ರಚಾರಕ್ಕಾಗಿ ತೆರಳಲು ಭಾನುವಾರ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಲವು ಸಿಡಿ, ವಿಡಿಯೋ, ಆಡಿಯೋ ಕ್ಲಿಪ್ಪಿಂಗ್‌ಗಳು ಬೆಳಕಿಗೆ ಬಂದಿವೆ. ದೂರು ಬಂದಿವೆ. ಅವನ್ನೆಲ್ಲ ವೈಜ್ಞಾನಿಕ ತನಿಖೆಗೆ ಒಳಪಡಿಸಿದ್ದೇವೆ ಎಂದ ಅವರು, ತನಿಖೆಯ ಹಂತದಲ್ಲಿ ಇರುವಾಗ ನಾನು ಏನು ಹೇಳಲು ಇಚ್ಛಿಸುವುದಿಲ್ಲ.
ಹಿಂದೆ ಮೇಟಿ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಹೇಗೆ ನಡೆದುಕೊಂಡರು ಎನ್ನುವುದನ್ನು ನೆನಪಿಸಿಕೊಳ್ಳಲಿ, ಅವರು ಕೇಸ್ ಕೂಡ ಮಾಡಿರಲಿಲ್ಲ, ಹಾಗಾಗಿ ಅವರೇನು ಹೇಳಿಕೆ ಕೊಟ್ಟರೂ ಮಹತ್ವ ಕೊಡಲಾರೆ ಎಂದರು.