ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಮನೆ ಮೇಲೆ ಎಸ್​ಐಟಿ ದಾಳಿ

WhatsApp Image 2025-10-17 at 2.41.30 PM
Published on

ಕಲಬುರಗಿ: ಆಳಂದ ಕ್ಷೇತ್ರದಲ್ಲಿ ಮತ ಚೋರಿ ಪ್ರಕರಣದ ಎಸ್​ಐಟಿ ತನಿಖೆಯೂ ವೇಗ ಪಡೆದಿದ್ದು, ಆಳಂದ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸುಭಾಷ ಗುತ್ತೇದಾರ್​ ಮನೆ ಮೇಲೆ ಎಸ್​ಐಟಿ ದಾಳಿ ನಡೆಸಿದೆ.

ನಗರದಲ್ಲಿ ಮೂರು ತಂಡಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ನಗರದ ಸುಮಾರು 150 ಸಿಬ್ಬಂದಿಯೊಂದಿಗೆ ಸ್ಥಳಿಯ ಪೊಲೀಸ್​ ಅಧಿಕಾರಿಗಳ ಸಹಕಾರದಲ್ಲಿ ಎಸ್​ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಗುಬ್ಬಿ ಕಾಲನಿಯಲ್ಲಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರ್​, ಖೂಬಾ ಬಡಾವಣೆಯ ವಿವೇಕಾನಂದ ನಗರದಲ್ಲಿನ ಚಾರ್ಟೆಡ್​ ಅಕೌಂಟೇಂಟ್​ ಮನೆ ಮೇಲೆ ದಾಳಿ ನಡೆಸಲಾಗಿದೆ. ಗುತ್ತೇದಾರ್​ ಖಾಸಗಿ ಅಂಗಡಿಗಳ ಮೇಲೂ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗುತ್ತಿದೆ. ಎಸ್​ಐಟಿ ಎಸ್​ಪಿ ಶುಭನ್ವಿತಾ ನೇತೃತ್ವದಲ್ಲಿ ಅಧಿಕಾರಿಗಳು ಎಲ್ಲೆಡೆ ತನಿಖೆ ಚುರುಕುಗೊಳಿಸಿದ್ದು, ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

2023ರ ವಿಧಾನಸಭೆ ಚುನಾವಣೆ ವೇಳೆ ಆಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಶಾಸಕ ಬಿ.ಆರ್​.ಪಾಟೀಲ್​ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದರು. ಆ ಪ್ರಕರಣವನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಎಸ್​ಐಟಿ ತನಿಖೆಗೆ ವಹಿಸಿತ್ತು. ಕಳೆದ ಮೂರು ದಿನಗಳಿಂದ ನಗರದಲ್ಲಿ ಎಸ್​ಐಟಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಅಕ್ರಮ್​ ಎಂಬಾತನ ಬಳಿ ಮಹತ್ವದ ದಾಖಲೆ ವಶಕ್ಕೆ ಪಡೆದಿತ್ತು. ಇದೀಗ ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಮನೆ ಮೇಲೆ ದಾಳಿ ನಡೆಸಿರುವುದು ಹೊಸ ರಾಜಕೀಯ ತಿರುವಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net