

ಮೈಸೂರು: ಎಸ್‌ಐಟಿ ಅನವಶ್ಯಕವಾಗಿ ಕೆಲವರನ್ನು ಬಂಧಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಕೀಲ ದೇವೇರಾಜೇಗೌಡರ ವಿರುದ್ಧ ಪ್ರಕರಣ ದಾಖಲಾಗಿ ಒಂದು ತಿಂಗಳ ನಂತರ ಅವರನ್ನು ಬಂಧಿಸಿದ್ದು ಏತಕ್ಕೆ? ಎಸ್‌ಐಟಿಯವರಿಗೆ ದೇವೇರಾಜೇಗೌಡರಿಂದ ಏನು ಮಾಹಿತಿ ಬೇಕಿದೆ? ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಮಾಹಿತಿನಾ? ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿನಾ? ಅಥವಾ ಈ ಪ್ರಕರಣದ ಆಡಿಯೋ ತುಣುಕು ಬಿಡುಗಡೆಯಾಗಿತ್ತಲ್ಲ ಅದರ ಮಾಹಿತಿನಾ? ಏತಾಕ್ಕಾಗಿ ಎಸ್‌ಐಟಿ ದೇವರಾಜೇಗೌಡರನ್ನು ಬಂಧಿಸಿದೆ ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಎರಡು ಭಾಗ ಇದೆ. ಒಂದು ವಿಡಿಯೋ ಮಾಡಿಕೊಂಡವನ ಅಪರಾಧ ಮತ್ತೊಂದು ಆ ವಿಡಿಯೋವನ್ನು ವೈರಲ್ ಮಾಡಿ ಕುಟುಂಬವನ್ನು ಬೀದಿಗೆ ತಂದವರದ್ದು. ಬೀದಿಗೆ ತಂದವರದ್ದು ಘೋರ ಅಪರಾಧ. ಆದರೆ ಎಸ್‌ಐಟಿ ವಿಡಿಯೋ ವೈರಲ್‌ಮಾಡಿ ದವರನ್ನು ಬಂಧಿಸುವಲ್ಲಿ ವಿಫಲವಾಗಿದೆ. ಆರೋಪಿ ಖಾಸಗಿ ಚಾನಲ್‌ಗೆ ಸಂದರ್ಶನ ನೀಡುತ್ತಾನೆ. ಆದರೆ, ಎಸ್‌ಐಟಿಗೆ ಸಿಗುತ್ತಿಲ್ಲ ಅಂದರೆ ಏನು ಅರ್ಥ? ಎಸ್‌ಐಟಿ ಸೂಕ್ತವಾದ ತನಿಖೆ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.