ಮೈಸೂರು: ಖಾಸಗೀಕರಣ ಮಾಡುವ ಹುನ್ನಾರಕ್ಕೆ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆ.4ರಂದು ಹಿನಕಲ್‌ನಲ್ಲಿರುವ ಸೆಸ್ಕ್ ಮುಖ್ಯ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
ರೈತರ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್‌ನ್ನು ಆಧಾರ್‌ಗೆ ಲಿಂಕ್ ಮಾಡಿಸಲಾಗುತ್ತಿದೆ. ಇದು ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕೃಷಿಗೆ ಮೂಲವಾಗಿ ಬೇಕಾದ ವಿದ್ಯುತ್ ಸಂಪರ್ಕ ಪಡೆಯಲು ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬ, ತಂತಿಯನ್ನು ಇಲಾಖೆಯ ವೆಚ್ಚದಿಂದ ನಿರ್ಮಿಸಿ ಇದಕ್ಕೆ ರೈತರ ವಂತಿಕೆಯಾಗಿ 17 ಸಾವಿರದಿಂದ 23 ಸಾವಿರ ರೂ. ಪಡೆಯಲಾಗುತ್ತಿತ್ತು. ಆದರೆ ಈ ವ್ಯವಸ್ಥೆ ಕೈ ಬಿಟ್ಟು, 2023 ಅಕ್ಟೋಬರ್‌ನಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯಲು ರೈತರೇ ನೇರವಾಗಿ ಮೂರು- ನಾಲ್ಕು ಲಕ್ಷ ಖರ್ಚು ಮಾಡುವ ಪರಿಸ್ಥಿತಿ ಬಂದಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಘೋಷಣೆ ಉಚಿತ ವಿದ್ಯುತ್ ನೀಡಲು ಯಾವುದೇ ಷರತ್ತು ಇಲ್ಲದೆ ಪ್ರತಿ ಮನೆಗಳಿಗೆ ತಲಾ 200 ಯುನಿಟ್ ನೀಡಬೇಕು, ಸೋಲಾರ್ ಅಳವಡಿಸಿಕೊಂಡ ರೈತರ ಪಂಪ್‌ಸೆಟ್‌ರಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ನಿಯಮ ಕೈಬಿಡಬೇಕು, ನಗರ ಮತ್ತು ಗ್ರಾಮೀಣ ಎಂಬ ವಿದ್ಯುತ್ ಎನ್ನುವ ತಾರತಮ್ಯ ನೀತಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಕೃಷಿಗೆ ಕೈಗಾರಿಕೆಗಳಿಗೆ ನೀಡುವಂತೆ ಹಗಲು ವೇಳೆ ವಿದ್ಯುತ್ ನೀಡಬೇಕು. ಭೂ ಸುಧಾರಣಾ ಕಾಯ್ದೆಯನ್ನು ತಕ್ಷಣ ರಾಜ್ಯ ಸರ್ಕಾರ ತಿದ್ದುಪಡಿ ಮಾಡಬೇಕು, ಯಾರು ಎಷ್ಟು ಜಮೀನು ಬೇಕಾದರೂ ಖರೀದಿ ಮಾಡಬಹುದು ಎಂಬ ನಿಯಮವನ್ನು ರದ್ದುಪಡಿಸಿ, ಉಳುವವನೇ ಭೂಮಿಯ ಒಡೆಯ ಎಂಬ ನಿಯಮವನ್ನು ಮತ್ತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಅನ್‌ಲೈನ್ ಗೇಮ್ಗಳ ಮುಖಾಂತರ ರಾಜ್ಯದಲ್ಲಿ ಕೋಟ್ಯಂತರ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿವೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ. ಈ ಗೀಳಿನಿಂದ ದೇಶದ ಭವಿಷ್ಯವನ್ನು ಕಟ್ಟುವ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆನ್‌ಲೈನ್ ಗೇಮ್ ಅನ್ನು ತಕ್ಷಣ ನಿಷೇಧ ಮಾಡಬೇಕು ಕೋರಿದರು.
ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ ಭೂಮಿ ನೀಡುವ ರಾಜ್ಯ ಸರ್ಕಾರ ಸಚಿವ ಸಂಪುಟದ ಒಪ್ಪಿಗೆಯನ್ನು ತಕ್ಷಣ ಕೈಬಿಡಬೇಕು. ವೈಜ್ಞಾನಿಕ ಬೆಲೆಯ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅಂಕನಹಳ್ಳಿ ತಿಮ್ಮಪ್ಪ, ಮಂಜೇಶ್ ಕುಮಾರ್, ರಾಜಪ್ಪ, ಕೃಷ್ಣಪ್ಪ ಇತರರು ಇದ್ದರು.