ಆ.೯ ರಂದು ಸಿಎನ್‌ಸಿಯಿಂದ ಧರಣಿ

N.U.NACHAPPA
Published on

ಮಡಿಕೇರಿ: ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಆದಿಮ ಸಂಜಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಆ.೯ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಿಗ್ಗೆ ೧೦.೩೦ ಗಂಟೆಯಿಂದ ೧೧.೩೦ ರವರೆಗೆ ಶಾಂತಿಯುತ ಧರಣಿ ಸತ್ಯಾಗೃಹ ನಡೆಸಿ ಕೊಡವರ ವಿವಿಧ ಹಕ್ಕುಗಳನ್ನು ಮಂಡಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿರುವ ಆದಿಮಸಂಜಾತ ಕೊಡವ ಬುಡಕಟ್ಟು ಜನರ ಬೇಡಿಕೆಗಳ ಬಗ್ಗೆ ದೇಶದ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯಲಾಗುವುದು. ಕೊಡವರು ಈ ಪವಿತ್ರ ಕೊಡವ ನೆಲದ ಮೂಲನಿವಾಸಿ ಆದಿಮಸಂಜಾತ ಬುಡಕಟ್ಟು ಸಮುದಾಯದವರಾಗಿದ್ದಾರೆ. ಕೊಡವರಿಗಿರುವ ಏಕೈಕ ನೆಲೆ ಕೊಡವ ಲ್ಯಾಂಡ್ ಕೊಡವರ ಸಾಂಪ್ರದಾಯಿಕ ಹಾಗೂ ಅವಿಭಾಜ್ಯ ಮಾತೃಭೂಮಿಯಾಗಿದ್ದು, ಕೊಡವರ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯನ್ನು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವಿಶ್ವ ರಾಷ್ಟ್ರ ಸಂಸ್ಥೆ ಆದಿಮಸಂಜಾತರ ಹಕ್ಕುಗಳಡಿಯಲ್ಲಿ ಸಾಂವಿಧಾನಿಕವಾಗಿ ರಕ್ಷಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ಒಳಗೊಂಡಂತೆ ಕೊಡವಲ್ಯಾಂಡ್‌ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತವನ್ನು ನೀಡಬೇಕೆಂದು ಧರಣಿ ಸಂದರ್ಭ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net