

ಬೆಂಗಳೂರು: ಕರೊನಾ ಸಂದರ್ಭದಲ್ಲಿ ನಡೆದ ಅವ್ಯವಹಾರದ ಬಗ್ಗೆ ಸತ್ಯ ಶೋಧನೆಯಾಗಿದ್ದು, ನ್ಯಾ. ಮೈಕಲ್.ಡಿ.ಕುನ್ಹಾ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ದೊರೆತಿರುವ ಮಾಹಿತಿ, ದಾಖಲೆಗಳನ್ನು ಆಧರಿಸಿ ಮುಂದಿನ ಕ್ರಮಕ್ಕಾಗಿ ರಾಜ್ಯ ಸರ್ಕಾರ ಎಸ್.ಐ.ಟಿ(SIT) ಯನ್ನು ರಚಿಸಬೇಕು ಎಂದು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು. ಶೀಘ್ರದಲ್ಲಿಯೇ ಎಸ್.ಐ.ಟಿ ಅಧಿಕಾರಿಗಳ ನೇಮಕದ ಕುರಿತು ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ. ಅಗತ್ಯವಿದ್ದಲ್ಲಿ ಎಫ್.ಐ.ಆರ್ ಹಾಕಿ ತನಿಖೆ ಕೈಗೊಳ್ಳಬಹುದು ಎಂದ ಅವರು, ಆಯೋಗದ ಮುಂದುವರೆದ ಕ್ರಮವಾಗಿ ಎಸ್.ಐ.ಟಿ ರಚಿಸಲಾಗುವುದು ಎಂದರು.
ಕೋವಿಡ್ 19 ಸಂದರ್ಭದಲ್ಲಿ ಜನರ ರಕ್ಷಣೆ ಮಾಡಬೇಕಾದ ಅಂದಿನ ಸರ್ಕಾರ ಅತ್ಯಂತ ಅಮಾನವೀಯವಾಗಿ ಜನರನ್ನು ನಡೆಸಿಕೊಂಡಿದೆ. ಭ್ರಷ್ಟಾಚಾರ, ಬೇಜವಾಬ್ದಾರಿತನ, ಜನರಿಗೆ ಮೋಸ, ಮಾಹಿತಿ/ವಿಷಯಗಳನ್ನು ಜನರಿಂದ ಮುಚ್ಚಿಡುವುದು ಸೇರಿದಂತೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸಿ ಭ್ರಷ್ಟಾಚಾರವನ್ನು ಯಾರ ಗಮನಕ್ಕೂ ಬಾರದಂತೆ ಮಾಡುವ ದೊಡ್ಡ ಪ್ರಯತ್ನ ಮಾಡಿದ್ದಾರೆ. ಶಾಸನಬದ್ಧ ಸಮಿತಿಗಳ ಕಾರ್ಯನಿರ್ವಹಣೆಯನ್ನು ಅಸಾಧ್ಯವೆನ್ನುವ ರೀತಿಯ ವಾತಾವರಣ ನಿರ್ಮಾಣ ಮಾಡಲಾಯಿತು. 330 ರೂ.ಗಳಿಗೆ ಲಭ್ಯವಿದ್ದ ಪಿಪಿಇ ಕಿಟ್ 2,117 ರೂ.ಗೆ ಲಕ್ಷಾಂತರ ಕಿಟ್ಗಳನ್ನು ಹೊರ ದೇಶದಿಂದ ತರಿಸಲಾಗಿದೆ. ಸಮಯ ಮೀರಿದ ಔಷಧಿಗಳನ್ನು ಖರೀದಿಸುವುದು ಸೇರಿ ಭ್ರಷ್ಟಾಚಾರ ಎಸಗಿದೆ.
6 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಿಬಿಐ ನಿರಾಕರಣೆ
ಸಿ.ಬಿ.ಐ ತನಿಖೆಗೆ ವಹಿಸಿದ 09 ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ 06 ಪ್ರಕರಣಗಳಲ್ಲಿ ತನ್ನಿಂದ ತನಿಖೆ ಸಾಧ್ಯವಿಲ್ಲವೆಂದು ಸಿ.ಬಿ.ಐ ತಿಳಿದೆ. ಈ 06 ಪ್ರಕರಣಗಳನ್ನು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ವಹಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವ ಎಚ್.ಕೆ ಪಾಟೀಲ ತಿಳಿಸಿದರು.
ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿ.ಬಿ.ಐ ವಾಪಸ್ಸು ಕಳುಹಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ ಎಂದರು.