ಸಿಸೋದಿಯಾ ಬಂಧನ : ಕೊಡಗು ಆಮ್ ಆದ್ಮಿ ಪಾರ್ಟಿ ಖಂಡನೆ

BOJANNA SOMAIHA
Published on

ಮಡಿಕೇರಿ: ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಷ್ ಸಿಸೋದಿಯಾ ಬಂಧನವನ್ನು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಖಂಡಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶಾದ್ಯಂತ ಎಎಪಿ ಬೆಳೆಯುತ್ತಿರುವುದನ್ನು ಸಹಿಸದ ಬಿಜೆಪಿ ಸರ್ಕಾರ ಹತಾಶ ಮನೋಭಾವದಿಂದ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆಮ್ ಆದ್ಮಿ ಪಾರ್ಟಿಯೊಂದೇ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಂಬುವುದನ್ನು ಅರಿತಿರುವ ಕೇಂದ್ರ ಸರ್ಕಾರ ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ತೊಂದರೆ ನೀಡುತ್ತಿದೆ ಎಂದು ಟೀಕಿಸಿದ್ದಾರೆ.


ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಮ್ ಆದ್ಮಿ ಪಾರ್ಟಿ ಪ್ರವರ್ಧಮಾನಕ್ಕೆ ಬರುತ್ತಿದೆ. ಜನರು ಎಎಪಿ ಪರವಾಗಿ ಇರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಚುನಾವಣೆಯ ಪ್ರಚಾರಕ್ಕೆ ಮನೀಷ್ ಸಿಸೋದಿಯಾ ಆಗಮಿಸಿ, ಇಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸಬಹುದು ಎಂಬ ಭಯದಿಂದ ಕೇಂದ್ರ ಸರ್ಕಾರ ಸಿಬಿಐ ಮೂಲಕ ಅವರನ್ನು ಬಂಧಿಸಿದೆ ಎಂದು ಆರೋಪಿಸಿದ್ದಾರೆ.


ಬಿಜೆಪಿಯು ಈ ರೀತಿ ಕೀಳುಮಟ್ಟದ ಕುತಂತ್ರ ಮಾಡುತ್ತಿರುವುದು ಖಂಡನೀಯ. ಗಿಡ ಚಿವುಟಿದಷ್ಟೂ ಚಿಗುರುವಂತೆ ಆಮ್ ಆದ್ಮಿ ಪಾರ್ಟಿ ಕೂಡ ಬಿಜೆಪಿ ತೊಂದರೆ ನೀಡಿದಷ್ಟೂ ಹೆಚ್ಚಿನ ವೇಗದಲ್ಲಿ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net