

ಸಿರವಾರ: ಕಳಪೆ ಕ್ರಿಮಿನಾಶಕ ಮಾರಾಟ ಮಾಡಿದ ಅಂಗಡಿ ಪರವಾನಗಿ ರದ್ದು ಮಾಡಲು ಒತ್ತಾಯಿಸಿ ರೈತ ಸಂಘಟನೆ ಬುಧವಾರ ಪಟ್ಟಣದ ರೈತ ಸಂಪರ್ಕ ಕಚೇರಿ ಮುಂಭಾಗ ಧರಣಿ ನಡೆಸಿತು.
ರೈತ ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಮಾತನಾಡಿ, ಪಟ್ಟಣದಲ್ಲಿ ಹಲವು ವರ್ಷಗಳಿಂದ ರೈತರಿಗೆ ಸರ್ಕಾರ ನಿಷೇಧಿಸಿದ ಬಯೋ ಕ್ರಿಮಿನಾಶಕ ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಖಚಿತ ಮಾಹಿತಿಯಿಂದ ಸಹಾಯಕ ಕೃಷಿ ನಿರ್ದೇಶಕ ಹಾಗೂ ರೈತ ಸಂಘ ನೇತೃತ್ವದಲ್ಲಿ ಅಂಗಡಿ ಮೇಲೆ ದಾಳಿ ಮಾಡಿದಾಗ ಅನಧಿಕೃತ ಕೊಠಡಿಯಲ್ಲಿ ಲಕ್ಷಾಂತರ ರೂ. ವೆಚ್ಚದ ಅವಧಿ ಮುಗಿದ ಮತ್ತು ನಿಷೇಧಿತ ಬೀಜ, ಕ್ರಿಮಿನಾಶಕಗಳು ಪತ್ತೆಯಾಗಿವೆ. ಕೃಷಿ ಇಲಾಖೆ ಅಧಿಕಾರಿಗಳು ಅನಧಿಕೃತ ಕೊಠಡಿ ಬೀಗ ಹಾಕಿ ಜಪ್ತಿ ಮಾಡಿತ್ತು. ಆದರೆ, ದೂರುದಾರರೂ ಇಲ್ಲದೆ ಎರಡು ದಿನಗಳ ಹಿಂದೆ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಗುರುನಾಥ ಸೀಜ್ ಮಾಡಿದ ಅಂಗಡಿ ತೆಗೆದು ಕ್ರಿಮಿನಾಶಕ ಇತರೆ ಔಷಧಿಗಳನ್ನು ಖಾಲಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ರೈತರಿಗೆ ಹಾಗೂ ರೈತ ಸಂಘದವರಿಗೆ ಅನ್ಯಾಯ ಮಾಡಿದ್ದಾರೆ. ಇವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹೊಳೆಪ್ಪ, ಹಸಿರು ಸೇನೆ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವಲಿಂಗಪ್ಪ ಉಟಕನೂರು ಪ್ರಮುಖರಾದ ರವಿಕುಮಾರ್ ಉಟಕನೂರು, ಹನುಮಂತ್ರಾಯ ಬಲ್ಲಟಿಗಿ, ಮಹೇಶ ಮಲ್ಲಟ, ಸುಲೇಚನ, ಯಲ್ಲಮ್ಮ, ಹುಸೇನಮ್ಮ, ಮರಿಬಸವ, ಭೀಮೇಶ ಇದ್ದರು.