

ಸಿರವಾರ: ಪಟ್ಟಣದ ಮರಾಠ ರಸ್ತೆಯ ತುಂಗಭದ್ರಾ ಎಡದಂಡೆ 92ನೇ ವಿತರಣಾ ಕಾಲುವೆ ಚರಂಡಿಯಾಗಿ ಮಾರ್ಪಟ್ಟಿದೆ. ನೂರಾರು ಎಕರೆ ಜಮೀನಿಗೆ ಈ ನಾಲೆ ಮೂಲಕ ನೀರು ಪೂರೈಕೆಯಾಗುತ್ತದೆ.
ತುಂಗಭದ್ರಾ ಎಡದಂಡೆ 92ನೇ ವಿತರಣಾ ನಾಲೆ ವ್ಯಾಪ್ತಿಯ ರೈತರು ಕೊಳಚೆ ನೀರಿನಲ್ಲಿ ಬೆಳೆ ಬೆಳೆಯುವಂತಾಗಿದೆ. ನಾಲೆ ಚರಂಡಿಯಂತಾಗಿರುವುದರಿಂದ ರೈತರು ಮೂಗು ಮುಚ್ಚಿಕೊಂಡು ಜಮೀನಿಗೆ ನೀರು ಹರಿಸುವಂತಾಗಿದೆ. ಶೌಚಗೃಹದ ಪೈಪ್‌ಲೈನ್ ಸಂಪರ್ಕ ಕೂಡ ಕಾಲುವೆಗೆ ಕಲ್ಪಿಸಿರುವುದರಿಂದ ತ್ಯಾಜ್ಯ ಮಿಶ್ರಿತ ನೀರನ್ನು ಹೊಲ-ಗದ್ದೆಗಳಿಗೆ ಬಿಟ್ಟುಕೊಳ್ಳುವ ಅನಿವಾರ್ಯತೆ ರೈತರದಾಗಿದ್ದೆ.
ಮರಾಠ ರಸ್ತೆಯ ವೆಂಕಟೇಶ್ವರ ದೇವಸ್ಥಾನದಿಂದ ಮಹಾತ್ಮ ಗಾಂಧಿ ಕಾಲನಿ ಕೊನೆಯ ಭಾಗದವರೆಗೆ ಅನೇಕ ಮನೆಗಳ ತ್ಯಾಜ್ಯವನ್ನು ಪೈಪ್‌ಲೈನ್ ಮೂಲಕ ಕಾಲುವೆ ಬಿಡಲಾಗುತ್ತಿದೆ. ಇದನ್ನು ಕಂಡು ಕಾಣದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದಾರೆ. ನಾಲೆಗೆ ತ್ಯಾಜ್ಯ ಹರಿಯದಂತೆ ತಡೆಯುವಲ್ಲಿ ಕೂಡ ಅಧಿಕಾರಿಗಳು ವಿಫಲರಾಗಿದ್ದಾರೆ.
ಸ್ವಚ್ಛತೆಗೆ ಇದು ಸಕಾಲ: ನಾಲೆ ರಾಯಚೂರು-ಲಿಂಗಸುಗೂರು ರಸ್ತೆಯಲ್ಲಿ ಹಾದು ಹೋಗಿರುವುದರಿಂದ ಪೈಪ್‌ನಲ್ಲಿ ಕಸ, ಇತರ ತ್ಯಾಜ್ಯವಿದ್ದರೆ ಕಾಲುವೆ ನೀರು ಮತ್ತು ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತದೆ. ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗುತ್ತದೆ. ಪ್ರಸ್ತುತ ನಾಲೆಯಲ್ಲಿ ನೀರು ಹರಿಯುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದುಬಂದ ಬಳಿಕ ನಾಲೆಗೆ ನೀರು ಹರಿಸಲಾಗುತ್ತದೆ. ಇದರಿಂದಾಗಿ ಸುಮಾರು ಮೂರು ತಿಂಗಳು ನಾಲೆಯಲ್ಲಿ ನೀರು ಇರುವುದಿಲ್ಲ. ನಾಲೆಗೆ ಸಂಪರ್ಕ ಕಲ್ಪಿಸಿರುವ ತ್ಯಾಜ್ಯ ಹಾಗೂ ಶೌಚಗೃಹದ ಸಂಪರ್ಕ ಕಡಿತಗೊಳಿಸಲು ಹಾಗೂ ನಾಲೆ ಸ್ವಚ್ಛಗೊಳಿಸಲು ಇದು ಸೂಕ್ತ ಸಮಯವಾಗಿದೆ.