ಬಿಡಾಡಿ ದನಗಳ ಹಾವಳಿ ತಡೆಯಿರಿ, ಪಪಂ ಆಡಳಿತಕ್ಕೆ ಸಾರ್ವಜನಿಕರು-ವಾಹನ ಸವಾರರ ಮನವಿ

BIDADI DANAGALU
ಸಿರವಾರದ ಮುಖ್ಯ ರಸ್ತೆಯಲ್ಲಿ ರಾತ್ರಿ ವೇಳೆ ಬಿಡಾಡಿ ದನಗಳು ನಿಂತಿರುವುದು.
Published on

ಸಿರವಾರ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಿಡಾಡಿ ದಾನಗಳ ಹಾವಳಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಬಸ್ ನಿಲ್ದಾಣದ ಹತ್ತಿರ, ಪಟ್ಟಣ ಪಂಚಾಯಿತಿ ಹಳೆ ಕಚೇರಿ ಮುಂದೆ, ಬಸವ ವೃತ್ತ ಸೇರಿ ಅನೇಕ ಕಡೆ ರಸ್ತೆ ಮಧ್ಯೆಯೇ ಬಿಡಾಡಿ ದನಗಳು ಬಿಡಾರ ಹೂಡುತ್ತಿದ್ದರಿಂದ ಸಂಚಾರಕ್ಕೆ ಸಂಕಷ್ಟಪಡುವಂತಾಗಿದೆ. ಇವುಗಳ ಕಾದಾಟದಿಂದ ಅನೇಕ ಬೈಕ್ ಸವಾರರು ಬಿದ್ದು ಗಾಯಮಾಡಿಕೊಂಡಿದ್ದು, ಕೆಲವರು ಮೂಳೆ ಮುರಿತದಿಂದ ಮನೆಯಲ್ಲೇ ಕೋರುವಂತಾಗಿದೆ.

ರಾತ್ರಿ ವೇಳೆ ರಸ್ತೆಯಲ್ಲೇ ಮಲಗುವುದರಿಂದ ಲಾರಿ ಇತರ ಬೃಹತ್ ವಾಹನಗಳು ದನ-ಕರುಗಳ ಮೇಲೆ ಹಾದು ಹೋಗಿ ಗಾಯಗೊಂಡ ಘಟನೆಗಳು ನಡೆದಿವೆ. ವರ್ಷದ ಹಿಂದೆ ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಿಡಾಡಿ ದನಗಳನ್ನು ರಾಯಚೂರು ಗೋಶಾಲೆಗೆ ಕಳುಹಿಸಿದ್ದರು.

ಆಗ ಸ್ವಲ್ಪ ದಿನಗಳ ಕಾಲ ದನಗಳ ಹಾವಳಿ ಕಡಿಮೆಯಾಗಿತ್ತು. ಈಗ ಪುನಃ ಹೆಚ್ಚಾಗಿದೆ. ಕೂಡಲೇ ಸ್ಥಳೀಯ ಆಡಳಿತ ಅನಾಹುತ ಆಗುವ ಮೊದಲು ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಮಾತು ಕೇಳದಿದ್ದರೆ ಅವುಗಳನ್ನು ಗೋಶಾಲೆ ಅಟ್ಟಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

ಈಗಾಗಲೇ ಡಂಗೂರ ಹೊಡೆಸಿ ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಯಾರು ಮುಂದೆ ಬಂದಿಲ್ಲ. ತಹಸೀಲ್ದಾರ್ ಹಾಗೂ ಪಿಎಸೈ ಜತೆ ಮಾತನಾಡಿ ಮುಂದಿನ ಕ್ರಮ ಜರುಗಿಸಲಾಗುವುದು. ತಿಮ್ಮಪ್ಪ ಜಗ್ಲಿ ಪಪಂ ಮುಖ್ಯಾಧಿಕಾರಿ ರಸ್ತೆ ಮಧ್ಯೆಯೇ ದನ-ಕರುಗಳು ನಿಲ್ಲುವುದು ಮಲಗುವುದನ್ನು ಮಾಡುತ್ತಿವೆ. ದೊಡ್ಡ ವಾಹನಗಳು ಹಾದು ಹೋದರೆ ಸತ್ತು ಹೋಗುತ್ತವೆ. ಆದ್ದರಿಂದ ಗೋಶಾಲೆ ಅಥವಾ ಬೇರೆ ಕಡೆಗೆ ಜಾನುವಾರುಗಳನ್ನು ಕಳುಹಿಸಬೇಕು.ಗುಜ್ಜಲ್ ಬಸವರಾಜ ನಾಯಕ ಸಿರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net