

ಸಿರವಾರ: ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿಯನ್ನು ಪ್ರತಿ ದಿನ ಎನ್.ಎಂ.ಎಂ.ಎಸ್ ಆ್ಯಪ್ ಮುಖಾಂತರವೇ ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ಎಂದು ಅಧಿಕಾರಿಗಳಿಗೆ ಸಿರವಾರ ತಾಪಂ ಇಒ ಬಸವರಾಜ ಶರಭ್ಯೆ ಸೂಚಿಸಿದರು.
ಗಣದಿನ್ನಿ ಗ್ರಾಮದಲ್ಲಿ ಖಾತ್ರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಬುಧವಾರ ಮಾತನಾಡಿದರು. ಕೂಲಿಕಾರರ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಬೇಕು. ಸಕಾಲಕ್ಕೆ ಕೂಲಿ ಪಾವತಿ ಮಾಡಬೇಕು. ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಬೇಕು ಎಂದರು. ನಂತರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.
ನರೇಗಾ ಸಹಾಯಕ ನಿರ್ದೇಶಕಿ ಶರ್ಫುನ್ನೀಸಾ ಬೇಗಂ, ಪಿಡಿಒ ವಿಜಯಕುಮಾರ್, ಗ್ರಾಪಂ ಅಧ್ಯಕ್ಷ ಸೂಗೂರಯ್ಯ ಸ್ವಾಮಿ, ತಾಂತ್ರಿಕ ಸಂಯೋಜಕ ವಿನೋದ, ತಾಂತ್ರಿಕ ಸಹಾಯಕ ಅನಂತ ರೆಡ್ಡಿ ಇತರರಿದ್ದರು.