

ಸಿರವಾರ: ತುಂಗಾಭದ್ರ ಎಡದಂಡೆ ನಾಲೆಯ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಸೋಮವಾರ ಮಾನ್ವಿ ಕ್ರಾಸ್‌ನಲ್ಲಿ ಬಿಜೆಪಿ ಮುಖಂಡರು ಹಾಗೂ ರೈತರು ಸಂಚಾರ ತಡೆ ನಡೆಸಿದರು.
ನಂತರ ಮಾತನಾಡಿದ ರೈತ ಸಂಘದ ಅಧ್ಯಕ್ಷ ಅಮರೇಶಗೌಡ ಚಾಗಬಾವಿ, ಈ ಭಾಗದ ರೈತರು ಪ್ರತಿ ವರ್ಷ ನೀರಿಗಾಗಿ ಪ್ರತಿಭಟನೆ ಮಾಡುವಂತಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ಬಂದ್ ಆದಾಗ ಮಾತ್ರ ಕೆಳ ಭಾಗಕ್ಕೆ ನೀರು ತಲುಪಲು ಸಾಧ್ಯ. ಕೆಳ ಭಾಗದ ಕೆರೆಗಳನ್ನು ತುಂಬಿಸಲು ಕಾಲುವೆಗಳ ಮೇಲೆ ಹೆಸರಿಗೆ ಮಾತ್ರ 144 ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಆದರೆ ಕಾಲುವೆಯಲ್ಲಿ ನೀರಿಲ್ಲ. ಎಲ್ಲ ಅಧಿಕಾರಿಗಳು ಬೇರೆಯವರ ಕೈಗೊಬ್ಬೆಯಾಗಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ಇಲಾಖೆ ಎಇ ಸತ್ಯನಾರಾಯಣ ಶೆಟ್ಟಿ, ಆ.16ರ ಐಸಿಸಿ ಸಭೆಯಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಿ, ನಂತರ ನೀರಿನ ಗೇಜ್ ಕಾಯ್ದುಕೊಂಡು ಕೆಳಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವ ಭರವಸೆ ನೀಡಿದರು.
ಸಂಚಾರ ಅಸ್ತವ್ಯಸ್ತ: ನೂರಾರು ರೈತರು ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ಸಂಚಾರಕ್ಕೆ ಅಸ್ತವ್ಯಸ್ತವಾಯಿತು. ಸೋಮವಾರ ಸಂತೆ ದಿನವಾದ್ದರಿಂದ ವಿವಿಧೆಡೆಯಿಂದ ಆಗಮಿಸಿದ್ದ ಜನರು ಸಂಕಷ್ಟ ಅನುಭವಿಸುವಂತಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ಮಾನ್ವಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮುಖಂಡರಾದ ಶಂಕರಗೌಡ ಹರವಿ, ರಾಜಪ್ಪಗೌಡ ಗಡದಿನ್ನಿ ಅಮರೇಶಪ್ಪ ಬಲ್ಲಟಗಿ, ವಿಜಯಕುಮಾರ ಗುಡ್ಡದಮನಿ, ಆರ್.ನಾಗರಾಜಗೌಡ, ಮೌಲಸಾಬ್ ಗಣದಿನ್ನಿ, ಸುರೇಶ ನವಲಕಲ್, ಅನಿತಾ ಮಂತ್ರಿ, ಉಮಾಶಂಕರ ಜೇಗರಕಲ್, ಕೃಷ್ಣ ನಾಯಕ, ವೀರೇಶ ಕಡದಿನ್ನಿ, ರಾಘವೇಂದ್ರ ಖಾಜನಗೌಡ, ಅರಣು ಕುಮಾರ ಹಾಗೂ ತುಂಗಾಭದ್ರಾ ಎಡದಂಡೆ ನಾಲೆಯ ಕೆಳಭಾಗದ ನೂರಾರು ರೈತರು ಇದ್ದರು.