

ಸಿರವಾರ: ಸರ್ಕಾರಿ ಶಾಲೆಯಲ್ಲಿ ಓದಿದ್ದೇವೆ. ಮುಂದೆ ಹೇಗೆ ಎಂಬ ಭಯ ಪಡದೆ, ನಿರ್ಭಯವಾಗಿ ಇಷ್ಟವಿರುವ ವಿಷಯದಲ್ಲಿ ಮುಂದಿನ ಶಿಕ್ಷಣ ಪಡೆಯಬೇಕು ಎಂದು ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮೌನೇಶ ಹಿರೇಹಣಿಗಿ ಹೇಳಿದರು.
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವಿದ್ಯಾರ್ಥಿಗೆ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟ. ತೇರ್ಗಡೆ ನಂತರ ಮುಂದಿನ ಗುರಿ ಇಟ್ಟುಕೊಂಡು ಕೋರ್ಸ್ ಮಾಡಬೇಕು. ನಾವು ಗ್ರಾಮೀಣ ಭಾಗದವರು ಎಂಬ ಭಯ ಬಿಟ್ಟು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಬೇಕು ಎಂದು ಸಲಹೆ ನೀಡಿದರು.
ವರ್ಗಾವಣೆಗೊಂಡ ಶಿಕ್ಷಕರಾದ ಕೇಶಪ್ಪ ಕಮ್ಮಾರ, ರಾಮಣ್ಣ ಮಡಿವಾಳ, ಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಶಿವರಾಜಪ್ಪ, ಮುಖ್ಯಶಿಕ್ಷಕಿ ಎಂ.ಗಿರಿಜಾ, ಮಂಜುನಾಥ ಇತರರಿದ್ದರು.