ಅಪಾಯ ಲೆಕ್ಕಿಸದೆ ಹಳ್ಳದಲ್ಲಿ ಬೈಕ್‌ಹೊತ್ತು ಸಾಗುವ ಯುವಕರು

14102020 Siraguppa Rain 1
Published on

ಒಂದು ದ್ವಿಚಕ್ರ ವಾಹನಕ್ಕೆ 100 ರೂ. | ಜೀವ ಕೈಯಲ್ಲಿಡಿದು ಸಾಗುತ್ತಿರುವ ಪ್ರಯಾಣಿಕರು

ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಬಳಿ ಹರಿಯುತ್ತಿರುವ ಯಲ್ಲಮ್ಮನ ಹಳ್ಳದಲ್ಲಿ ಮಳೆ ನೀರು ರಭಸವಾಗಿ ಹರಿಯುತ್ತಿದ್ದರೂ ಅಪಾಯವನ್ನು ಲೆಕ್ಕಿಸದೆ ಯುವಕರ ತಂಡವೊಂದು ಬೈಕ್‌ಗಳನ್ನು ಈ ದಡದಿಂದ ಆ ದಡಕ್ಕೆ, ಆ ದಡದಿಂದ ಈ ದಡಕ್ಕೆ ಸಾಗಿಸುತ್ತಿದ್ದಾರೆ.

ಸೀಮಾಂಧ್ರಪ್ರದೇಶ ಮತ್ತು ತಾಲೂಕಿನ ಕೆ.ಬೆಳಗಲ್ ಸುತ್ತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಸುರಿದ ಮಳೆಯಿಂದ ತಾತ್ಕಾಲಿಕ ಸೇತುವೆ ಮೇಲೆ ಮಳೆ ನೀರು ಹರಿಯುತ್ತಿದೆ. ವಿಷಯ ತಿಳಿದ ದ್ವಿಚಕ್ರ ವಾಹನ ಸವಾರರು ತಮ್ಮ ಗ್ರಾಮಗಳಿಗೆ ವಾಪಾಸ್ ತೆರಳು ಆಗದೆ ಇರುವುದರಿಂದ ರಾರಾವಿ ಗ್ರಾಮದ ಯುವಕರು ತಂಡವಾಗಿ ಪ್ರಯಾಣಿಕರ ದ್ವಿಚಕ್ರ ವಾಹನಗಳನ್ನು ಹಳ್ಳದಲ್ಲಿ ದಾಟಿಸುತ್ತಿದ್ದಾರೆ.

ಬೈಕ್‌ಗೆ ನೂರು ರೂ.: ಒಂದು ದಡದಿಂದ ಇನ್ನೊಂದು ದಡಕ್ಕೆ ಬೈಕ್ ಹೊತ್ತು ಸಾಗಿಸಲು ಯುವಕರ ತಂಡ ನೂರು ರೂಪಾಯಿ ಪಡೆಯುತ್ತಿದೆ. ಹಳ್ಳದ ಬಳಿ ಏಳೆಂಟು ಜನರ ತಂಡ ದ್ವಿಚಕ್ರ ವಾಹನ ಸವಾರರ ಬರುವಿಕೆಗಾಗಿಯೇ ಕಾಯುತ್ತಿರುತ್ತಾರೆ. ತಾತ್ಕಾಲಿಕ ಸೇತುವೆಯು ಚಿಕ್ಕದಾಗಿದ್ದು, ದ್ವಿಚಕ್ರ ವಾಹನ ಹೊತ್ತು ಸಾಗಿಸುವಾಗ ಸ್ವಲ್ಪ ಆಯಾ ತಪ್ಪಿದರೂ ವಾಹನ ಸಮೇತ ಯುವಕರು ನೀರಿಗೆ ಬೀಳುವ ಸಾಧ್ಯತೆ ಇದೆ. ಆದರಿಲ್ಲಿ ಯುವಕರು ಅಪಾಯವನ್ನು ಲೆಕ್ಕಿಸದೇ ದ್ವಿಚಕ್ರ ವಾಹನ ಮತ್ತು ಸವಾರರನ್ನು ದಾಟಿಸಲು ಮುಂದಾಗಿದ್ದಾರೆ.

ಪರ್ಯಾಯ ಮಾರ್ಗದತ್ತ ಚಿತ್ತ: ಯಲ್ಲಮ್ಮನ ಹಳ್ಳದ ತಾತ್ಕಾಲಿಕ ಸೇತುವೆ ಪದೇ ಪದೆ ನೀರಿಗೆ ಕೊಚ್ಚಿ ಹೋಗುತ್ತಿದ್ದು, ಈ ಮೂಲಕ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಲಾರಿ, ಸರ್ಕಾರಿ ಬಸ್, ಲಘು ವಾಹನಗಳು ಪರ್ಯಾಯ ಮಾರ್ಗವಾದ ಬಂಡ್ರಾಳ್ ಮೂಲಕ ಸಂಚರಿಸುತ್ತಿವೆ.

ಮಳೆವರದಿ: ತಾಲೂಕಿನಲ್ಲಿ ಹಚ್ಚೊಳ್ಳಿಯಲ್ಲಿ ಅತಿಹೆಚ್ಚು 32.1ಮಿ.ಮೀ ಹಾಗೂ ಅತಿ ಕಡಿಮೆ ಸಿರಗುಪ್ಪ 9.3ಮಿ.ಮೀಟರ್ ಕಡಿಮೆ ಮಳೆಯಾಗಿದೆ. ತೆಕ್ಕಲಕೋಟೆ 19.4, ಸಿರಿಗೇರಿ 19.3, ಎಂ.ಸೂಗೂರು 15.6, ರಾವಿಹಾಳ್ 14.4, ಕರೂರು 10.4,ಕೆ.ಬೆಳಗಲ್ 20.6, ಮಿ.ಮೀಟರ್ ಮಳೆಯಾಗಿದೆ.

ರಾರಾವಿ ಸೇತುವೆ ನಿರ್ವಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಸರ್ಕಾರ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನದ ತಲಾ ಶೇ.50 ಅನುದಾನದಲ್ಲಿ ಸೇತುವೆ ನಿರ್ಮಿಸಲಾಗುವುದು. ಶ್ರೀದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು.| ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net