ಜೋಳ ಖರೀದಿಗಾಗಿ 3,295 ರೈತರು ನೋಂದಣಿ

230322 Siraguppa APMC Jawara Puchase
ಸಿರಗುಪ್ಪ ನಗರದ ಎಪಿಎಂಸಿಯಲ್ಲಿ ರೈತರಿಂದ ಖರೀದಿಸಿದ ಜೋಳವನ್ನು ಗೋದಾಮಿನಲ್ಲಿ ಸಂಗ್ರಹಿಸಲಾಗುತ್ತಿದೆ.
Published on

ಸಿರಗುಪ್ಪ: ತಾಲೂಕಿನಲ್ಲಿ ರೈತರು ಬೆಳೆದ ಜೋಳ ಖರೀದಿಸಲು ನಗರದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ಟ್ರ್ಯಾಕ್ಟರ್‌ಗಳಲ್ಲಿ ಜೋಳದ ಚೀಲಗಳನ್ನು ತುಂಬಿಕೊಂಡು ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ಬರುತ್ತಿದ್ದಾರೆ.

ಜನವರಿ 24 ರಿಂದ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಮಾರ್ಚ್ 20ರಿಂದ ಜೋಳ ಖರೀದಿ ಆರಂಭವಾಗಿದೆ. ಮಾರ್ಚ್ 31ರ ವರೆಗೆ ರೈತರು ಜೋಳ ಮಾರಾಟ ಮಾಡಲು ಸರ್ಕಾರ ಅವಕಾಶ ನೀಡಿದೆ. ತಾಲೂಕಿನಲ್ಲಿ 4,860 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯಾದ ಬಗ್ಗೆ ಬೆಳೆ ಸಮೀಕ್ಷೆಯಲ್ಲಿ ನೋಂದಣಿಯಾಗಿದೆ. ಈ ಪ್ರಕಾರ ಜೋಳ ಖರೀದಿ ಕೇಂದ್ರದಲ್ಲಿ ಆಹಾರ ಇಲಾಖೆಯ ಗೋದಾಮು ಅಧಿಕಾರಿಗಳು ಪರಿಶೀಲನೆ ನಡೆಸಿ ಕೃಷಿ ಇಲಾಖೆಯ ಗೋದಾಮಿನಲ್ಲಿ ಖರೀದಿ ಮಾಡುವ ಪ್ರಕ್ರಿಯೆ ನಡೆಸಿದ್ದಾರೆ.

ಜೋಳ ಖರೀದಿಗಾಗಿ 3,295 ರೈತರು ನೋಂದಣಿ ಮಾಡಿಸಿದ್ದು, ರೈತರಿಂದ ಪ್ರತಿ ಎಕರೆಗೆ 10ಕ್ವಿಂಟಾಲ್‌ನಂತೆ ನೋಂದಣಿಯಾದ ರೈತರಿಂದ ಖರೀದಿಸಲು ಅವಕಾಶವಿದೆ. 1,29,220.76 ಕ್ವಿಂಟಾಲ್ ಜೋಳ ಖರೀದಿಸುವ ಗುರಿ ಹೊಂದಲಾಗಿದೆ. 805 ರೈತರಿಂದ 33,611.50 ಕ್ವಿಂಟಾಲ್ ಜೋಳ ಖರೀದಿ ಕೇಂದ್ರದಲ್ಲಿ ಈಗಾಗಲೆ ಖರೀದಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೋದಾಮಿನ ವ್ಯವಸ್ಥಾಪಕ ಬಸವರಾಜ ತಿಳಿಸಿದ್ದಾರೆ.

ತಾಲೂಕಿನಲ್ಲಿ ಮುಂಗಾರು ಕೊನೆಯಲ್ಲಿ ಹಿಂಗಾರು ಪ್ರಾರಂಭದಲ್ಲಿ ಅತಿವೃಷ್ಟಿ ವಿವಿಧ ರೋಗಬಾಧೆಯಿಂದ ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಸಂಪೂರ್ಣ ನಷ್ಟವಾಗಿತ್ತು. ಮುಂಗಾರಿನಲ್ಲಿ ಭತ್ತದ ಕಟಾವು ನಂತರ ಪರ್ಯಾಯವಾಗಿ 4,860 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಬೆಳೆ ಸಮೀಕ್ಷೆಯಲ್ಲಿ ದೃಢೀಕರಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರ ನಜೀರ್ ಅಹಮ್ಮದ್ ತಿಳಿಸಿದ್ದಾರೆ.

ಎಪಿಎಂಸಿಯಲ್ಲಿ ಆಹಾರ ಧಾನ್ಯಗಳ ಮಾರಾಟಕ್ಕಾಗಿ ಬರುವ ರೈತರ ವಾಸ್ತವ್ಯಕ್ಕೆ ರೈತ ಭವನ ಇದ್ದರೂ ಅದಕ್ಕೆ ಬೀಗ ಹಾಕಲಾಗಿದೆ. ಕುಡಿಯಲು ಶುದ್ಧ ನೀರು ಸೇರಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಪರದಾಡುವ ಸ್ಥಿತಿ ಇದೆ ಎಂದು ತಾಳೂರು ಗ್ರಾಮದ ರೈತರಾದ ಕಾರ್ಮಿಂಚಪ್ಪ, ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net