ಸಿರಗುಪ್ಪ ತಾಲೂಕು ಉತ್ತನೂರು ಜನರ ಸಮಸ್ಯೆ ಆಲಿಸಿದ ಡಿಸಿ ಪನವಕುಮಾರ್ ಮಾಲಪಾಟಿ

DC Malapati Visit Uttanoor
ಪಿಂಚಣಿ ವಿಷಯವಾಗಿ ಉತ್ತನೂರು ಗ್ರಾಮದ ವೃದ್ಧೆಯೊಂದಿಗೆ ಡಿಸಿ ಪವನ್‌ಕುಮಾರ್ ಮಾಲಪಾಟಿ ಚರ್ಚಿಸಿದರು.
Published on

ಸಿರಗುಪ್ಪ: ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಿಸಿ ಪವನಕುಮಾರ ಮಾಲಪಾಟಿ ಉತ್ತನೂರು ಗ್ರಾಮಕ್ಕೆ ಶನಿವಾರ ಭೇಟಿ ನೀಡಿ, ಮನೆಮನೆಗೆ ತೆರಳಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಮೂರನೇ ಅಂಗನವಾಡಿ ಕೇಂದ್ರದಲ್ಲಿ 2018ರಿಂದ ಇಲ್ಲಿಯವರೆಗೆ ಮಕ್ಕಳ ತೂಕದ ಬಗ್ಗೆ ದಾಖಲಿಸದೆ ಇರುವುದನ್ನು ಕಂಡು ಸಿಡಿಪಿಒ ಜಲಾಲಪ್ಪರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಿಡಿಪಿಒ ಮತ್ತು ಮೇಲ್ವಿಚಾರಕಿಗೆ ನೋಟಿಸ್ ಜಾರಿಮಾಡಿದರು. ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕ್ರಮ ಜರುಗಿಸುವಂತೆ ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿಗೆ ಡಿಸಿ ಸೂಚಿಸಿದರು.

ಪಡಿತರ ಚೀಟಿ, ವೃದ್ಧಾಪ್ಯ ವೇತನ, ಇತರೆ ಸಮಸ್ಯೆಗಳನ್ನು ಪರಿಹರಿಸಿದರು. ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾವೇತನ ಸರಿಯಾದ ಸಮಯಕ್ಕೆ ಬರುತ್ತದೆ. ಆದರೂ, ಅಂಚೆ ಕಚೇರಿಯಿಂದ ವಿತರಿಸುವವರು 20 ರೂ.ಯಿಂದ 100 ರೂ.ವರೆಗೆ ತೆಗೆದುಕೊಳ್ಳುತ್ತಿದ್ದಾರೆಂದು ಫಲಾನುಭವಿಗಳು ಡಿಸಿ ಗಮನಕ್ಕೆ ತಂದರು.

ಕೂರಿಗನೂರು ಕಾಲುವೆಯಿಂದ ಹೊಲಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ. ಕಳೆದ 10 ವರ್ಷದಿಂದ ಬೆಳೆ ಬೆಳೆಯಲು ಕಷ್ಟವಾಗುತ್ತಿದೆ. ಇದರಿಂದಾಗಿ ಗುಳೆ ಹೋಗಬೇಕಾಗಿದೆ. ದಯವಿಟ್ಟು ಹೊಲಗಳಿಗೆ ನೀರು ಕೊಡಿಸುವ ವ್ಯವಸ್ಥೆ ಮಾಡಿ ಎಂದು ರೈತರು ಮನವಿ ಮಾಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹರಿಸಲಾಗುವುದು ಎಂದು ಪವನಕುಮಾರ ಮಾಲಪಾಟಿ ತಿಳಿಸಿದರು.

ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆ ಮೂರು ಸಾವಿರ ರೂ. ಕೇಳುತ್ತಾರೆ. ಬಡವರಾದ ನಾವು ಎಲ್ಲಿಂದ ಕೊಡಬೇಕು ಎಂದು ಮಹಿಳೆಯರು ಅವಲತ್ತುಕೊಂಡರು. ಆಸ್ಪತ್ರೆ ಸಿಬ್ಬಂದಿಯನ್ನು ಕರೆಯಿಸಿ ಕ್ರಮ ಕೈಗೊಳ್ಳುವುದಾಗಿ ಡಿಸಿ ಹೇಳಿದರು.

ಗ್ರಾಮದಲ್ಲಿ ಕೇವಲ 37 ಮನೆಗಳ ನಿರ್ಮಾಣಕ್ಕೆ ಅವಕಾಶವಿದೆ. ಆದರೆ, 207 ಅರ್ಜಿಗಳು ಬಂದಿವೆ. ಇಷ್ಟು ಮನೆಗಳನ್ನು ನಿರ್ಮಿಸಲು ಆಗುತ್ತಿಲ್ಲವೆಂದು ಪಿಡಿಒ ರಾಜಕುಮಾರ್‌ನಾಯ್ಕ ತಿಳಿಸಿದರು. ಗ್ರಾಮದ ಹತ್ತಿರ 12 ಎಕರೆ ಜಮೀನು ಖರೀದಿಸಿ, ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿಗೆ ಪವನಕುಮಾರ ಮಾಲಪಾಟಿ ಸೂಚಿಸಿದರು. ತಹಸೀಲ್ದಾರ್ ಎಸ್.ಬಿ.ಕೂಡಲಗಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net