

ಸಿರಗುಪ್ಪ: ನಗರದ ಗಾಂಧಿವೃತ್ತದಲ್ಲಿ ಮಾರಾಟಕ್ಕಿಟ್ಟ ಮಣ್ಣಿನ ಗಣಪತಿಗಳನ್ನು ನಗರಸಭೆ ಅಧಿಕಾರಿಗಳು ಹೊತ್ತೊಯ್ಯುವಾಗ ಮೂರ್ತಿಯ ಕಾಲಿನ ಭಾಗ ಮುರಿದ ಹಿನ್ನೆಲೆಯಲ್ಲಿ ಹಿಂದುಪರ ಸಂಘಟನೆಗಳ ಮುಖಂಡರು ಭಾನುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಚನ್ನಬಸವ ಮಾತನಾಡಿ, ಸರ್ಕಾರ ಮಣ್ಣಿನ ಗಣಪತಿಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ನಗರಸಭೆ ಅಧಿಕಾರಿಗಳು, ಪಿಒಪಿ ಗಣಪತಿಗಳೆಂದು ವಿನಾಕಾರಣ ನೆಪ ಹೇಳಿ ಆಟೋದಲ್ಲಿ ತುಂಬಿಕೊಂಡು ಹೋಗುವಾಗ ಮೂರ್ತಿಯೊಂದರ ಕಾಲಿನ ಭಾಗ ಮುರಿದಿದ್ದು, ತೀವ್ರ ನೋವಾಗಿದೆ. ಮಣ್ಣಿನ ಅಥವಾ ಪಿಒಪಿ ಮೂರ್ತಿಗಳೆಂದು ಪರೀಕ್ಷಿಸದೆ ನಗರಸಭೆ ಅಧಿಕಾರಿಗಳು ಹೊತ್ತೊಯ್ದಿದ್ದಾರೆ. ಗಣೇಶೋತ್ಸವ ಆಚರಿಸಬಾರದೆಂದು ಹೀಗೆ ಮಾಡಿದ್ದಾರೆ. ಘಟನೆಗೆ ಕಾರಣರಾದ ಅಧಿಕಾರಿಗಳು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಇತ್ತೀಚೆಗೆ ಮೊಹರಂ ಅನ್ನು ಸರ್ಕಾರ ನಿಷೇಧ ಮಾಡಿದ್ದರೂ ಅದ್ದೂರಿಯಾಗಿಯೇ ಅಚರಿಸಲಾಯಿತು. ಆಗ ನಗರಸಭೆ ಅಧಿಕಾರಿಗಳು ಸುಮ್ಮನಿದ್ದರು. ಇದೀಗ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಲು ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಸಿಪಿಐ ರಮೇಶ ಪವಾರ್, ಪಿಎಸ್‌ಐ ರಂಗಯ್ಯ ಭೇಟಿ ನೀಡಿ, ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಅಧಿಕಾರಿಗಳು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ನಾಲ್ಕು ಗಂಟೆಗೂ ಹೆಚ್ಚು ಹೊತ್ತು ಸಂಚಾರ ತಡೆ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಆಯಿತು. ಬಳಿಕ ನಗರಸಭೆ ಪೌರಾಯುಕ್ತ ರಾಘವೇಂದ್ರಗುರು, ವ್ಯವಸ್ಥಾಪಕ ಪ್ರಸಾದ್, ಪರಿಸರ ಅಧಿಕಾರಿ ಹನುಮೇಶ ಆಗಮಿಸಿ, ಪಿಒಪಿ ಅಥವಾ ಮಣ್ಣಿನದೆಂದು ಪರೀಕ್ಷಿಸಲು ತೆರಳಿದ್ದೆವು. ಆದರೂ ಮೂರ್ತಿಗಳನ್ನು ತೆಗೆದುಕೊಂಡು ಹೋಗುವಲ್ಲಿ ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದರು.
ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಶ್ರೀರಾಮಸೇನೆಯ ಜಿಲ್ಲಾ ಅಧ್ಯಕ್ಷ ಕಂಬಳಿ ಮಲ್ಲಿಕಾರ್ಜುನ, ವಿಶ್ವ ಹಿಂದು ಪರಿಷತ್ ಸದಸ್ಯ ಹೇಮನಗೌಡ, ಹಿಂದುಪರ ಸಂಘಟನೆಯ ಸದಸ್ಯರಾದ ಎ.ಜೆ.ಮಂಜುನಾಥ, ಬಿ.ಮಂಜುನಾಥಶೆಟ್ಟಿ, ಅನಿಲ್, ರಮೇಶ, ಸುನೀಲ್, ಗೋಪಿ, ಶಿವಕುಮಾರ್, ದ್ಯಾಮನಗೌಡ ಇದ್ದರು.