

ಶಿರಸಿ: ಕೆನರಾ ಪ್ರಿವಿಲೇಜ್ ಕಾಯ್ದೆ ಮೂಲಕ ಜಿಲ್ಲೆಯ ರೈತರಿಗೆ ಸೊಪ್ಪಿನ ಬೆಟ್ಟದ ಹಕ್ಕು ನೀಡಲಾಗಿದೆ. ಕಾಯ್ದೆ ಅನ್ವಯ ಸರ್ಕಾರ ಸೊಪ್ಪಿನ ಬೆಟ್ಟವನ್ನು ಕಾನೂನು ಬದ್ಧಗೊಳಿಸಿದರೆ ರೈತರಿಗೂ ಭದ್ರತೆ, ಬದ್ಧತೆ ಬರಲಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಗ್ರಹಿಸಿದರು. ತಾಲೂಕಿನ ಯಡಳ್ಳಿಯಲ್ಲಿ ವೃಕ್ಷ ಲಕ್ಷ ಆಂದೋಲನ, ಯಡಹಳ್ಳಿ ಸೇವಾ ಸಹಕಾರಿ ಸಂಘ, ಜಿಲ್ಲಾ ಅಡಕೆ ಬೆಳೆಗಾರರ ಸಂಘ, ಅರಣ್ಯ ಇಲಾಖೆ ಸಹಕಾರದಲ್ಲಿ ಬೆಟ್ಟದ ಸುಸ್ಥಿರ ಅಭಿವೃದ್ಧಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯ ಕೃಷಿ ಬೆಟ್ಟ ಭೂಮಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಜಿಲ್ಲೆಯಲ್ಲಿ ಬಹುಭಾಗ ಇರುವ ಬೆಟ್ಟಗಳ ಅಭಿವೃದ್ಧಿ ಆಗಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೆಟ್ಟ ಹಾಗೂ ತೋಟದ ವ್ಯವಸ್ಥೆ ಆಪತ್ತಿನಲ್ಲಿದೆ. ಹಿಂದಿನಿಂದ ಈ ತೋಟಕ್ಕೆ ಬೆಟ್ಟ, ಭೂಮಿ ಎಂದು ಪಹಣಿ ಪತ್ರಿಕೆಗಳಲ್ಲಿ ದಾಖಲಿಸಿದ್ದರೂ ಇತ್ತೀಚೆಗೆ ದಾಖಲೆ ಸರಿಯಾಗಿ ಇರದ ಕಾರಣ ಸಮಸ್ಯೆ ಆಗಿದೆ. ಒಂದು ಬೆಟ್ಟದಲ್ಲಿ ಹತ್ತಾರು ರೈತರ ಹೆಸರಿರುವುದೂ ಸಮಸ್ಯೆಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಬೆಟ್ಟದ ಭೂಮಿಯನ್ನು ಬ ಕರಾಬು ಎಂದು ದಾಖಲಿಸಿರುವುದು ಸ್ಥಳೀಯ ಶಾಸಕರ ಗಮನಕ್ಕೆ ಕೂಡ ತರಲಾಗಿದೆ. ಉತ್ತರ ಕನ್ನಡದ ನಿಜವಾದ ಅಭಿವೃದ್ಧಿ ಎಂದರೆ ಬೆಟ್ಟಗಳ ಅಭಿವೃದ್ಧಿಯೂ ಒಂದಾಗಿದೆ. ಬೆಟ್ಟದ ಸಂರಕ್ಷಣೆ ಆಗಬೇಕು. ಬೆಟ್ಟದಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಉತ್ಪನ್ನಗಳ ಮರಾಟದಿಂದ ಲಾಭ ಹೆಚ್ಚಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು. ಯುವ ಸಮುದಾಯ ವಸ್ತುಳನ್ನು ಬಳಸಿ ಬಿಸಾಕುವ ಪ್ರವೃತ್ತಿ ಜಾಸ್ತಿ ಆಗುತ್ತಿದೆ. ಈ ರೀತಿ ಮನೋಭಾವದಿಂದ ಪರಿಸರ ಹಾನಿ ಜಾಸ್ತಿಯಾಗುತ್ತಿದೆ. ಯುವ ಜನತೆ ಭವಿಷ್ಯದ ಬಗ್ಗೂ ಆಲೋಚಿಸಬೇಕು. ಯುದ್ಧಕ್ಕಿಂತ ಪರಿಸರ ನಾಶ ಅತಿದೊಡ್ಡ ಸಮಸ್ಯೆಯಾಗುತ್ತದೆ. ಗ್ರೀಷ್ಮ ಋತುವಿನಲ್ಲಿ ಗಿಡ ನೆಟ್ಟರೆ ಪ್ರಕೃತಿ ಪೂಜೆ ಮಾಡಿದಂತೆ ಎಂದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬೆಟ್ಟದ ಅಭಿವೃದ್ಧಿ ವಿಚಾರದಲ್ಲಿ ಎಲ್ಲ ರೈತರೂ ಮುಂದಾಗಬೇಕು. ಸವಾಲುಗಳ ಮಧ್ಯೆ ಸಾಧನೆ ಮಾಡಬೇಕಿದೆ. ಏನೂ ಆಗೋದಿಲ್ಲ ಎಂಬುದಕ್ಕಿಂತ ಏನಾದರೂ ಸಾಧಿಸಬೇಕು ಎಂಬಂತೆ ವಿಶ್ವಾಸ ಪೂರ್ಣ ಚಟುವಟಿಕೆ ನಡೆಯಬೇಕು ಎಂದರು. ಹೋರಾಟಗಾರ ಅನಂತ ಅಶೀಸರ ಮಾತನಾಡಿ, ಸ್ವರ್ಣವಲ್ಲೀ ಮಠದಿಂದ 22 ಜನರಿಗೆ ಬೆಟ್ಟ ಅಭಿವೃದ್ದಿ ಪ್ರಶಸ್ತಿ ನೀಡಲಾಗಿದೆ. ಬೆಟ್ಟ ಸಂರಕ್ಷಣೆಗೆ ಎಲ್ಲರೂ ಸಹಕರಿಸಬೇಕು. ಬೆಟ್ಟ ಹಕ್ಕು ಬಿಟ್ಟುಕೊಡುವಂತಾಗಬೇಕು, ಬೆಟ್ಟಕ್ಕೆ ಸರ್ವೆ ನಂಬರ್ ಕೊಡವೇಕು, ಬ ಕರಾಬು ತೆಗೆದುಹಾಕಬೇಕು ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜೆ.ಆರ್. ಮಾತನಾಡಿ, ಒಂದು ಎಕರೆ ಅಡಕೆ ತೋಟಕ್ಕೆ ಒಂಬತ್ತು ಎಕರೆ ಬೆಟ್ಟ ಭೂಮಿಯನ್ನು ಹಿಂದಿನಿಂದಲೂ ನೀಡಲಾಗಿದೆ. ಅದನ್ನು ಒಳ್ಳೆಯ ಆದಾಯಕ್ಕೆ ಬಳಸಿಕೊಳ್ಳಬೇಕು ಎಂದರು. ಇದೇ ವೇಳೆ ಶ್ರೀಧರ ಕೆರೆಕೊಪ್ಪ ಅವರನ್ನು ಗೌರವಿಸಲಾಯಿತು. ಸೊಸೈಟಿ ಅಧ್ಯಕ್ಷ ಜಿ.ಆರ್. ಬೆಳ್ಳೇಕೇರಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ರೂಪಾ ಪಾಟೀಲ, ಅನಂತ ಭಟ್ ಕರಸುಳ್ಳಿ, ವಿಶ್ವೇಶ್ವರ ಭಟ್ ಕೋಟೆಮನೆ ಇತರರಿದ್ದರು.
ಕಾರ್ಬನ್ ಕ್ರೆಡಿಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿದೆ. ನಮ್ಮ ಕೃಷಿ ಪದ್ಧತಿ, ವಾಣಿಜ್ಯ ಬೆಳೆಯಾದ ಅಡಕೆ ಮರಗಳಿಂದ ಪರಿಸರಕ್ಕೆ ಅಧಿಕ ಪ್ರಮಾಣದಲ್ಲಿ ಆಮ್ಲಜನಕ ದೊರೆಯುತ್ತಿದ್ದು, ಕಾರ್ಬನ್ ಕ್ರೆಡಿಟ್ ಮುಂದೊಂದು ದಿನ ಸಿಗುವ ನಿರೀಕ್ಷೆ ಇದೆ. ತಾಯಿ, ತಂದೆ, ಪ್ರೇರಕರು, ಗುರುಗಳ ಹೆಸರಿನಲ್ಲಿ ಗಿಡ ನೆಡುವ ಕಾರ್ಯ ಆಗಲಿ. ರಾಜ್ಯ ಅರಣ್ಯ ಸಚಿವರು ಉ.ಕ. ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ಸೂಚಿಸಿರುವುದು ಸ್ವಾಗತಾರ್ಹ. | ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ ಪ್ರಕೃತಿ ಮನುಷ್ಯನ ತಾಯಿ. ಮಕ್ಕಳಿಗೆ ಬೇಕಾದದ್ದನ್ನು ಕೊಡುವವಳು ತಾಯಿ. ದುರಾಸೆಯನ್ನು ಬಯಸಿದರೆ ಆ ತಾಯಿ ಪೆಟ್ಟು ಕೊಡುತ್ತಾಳೆ. | ಸ್ವರ್ಣವಲ್ಲೀ ಸ್ವಾಮೀಜಿ