ಪರಿಸರ ಜಾಗೃತಿ ಪ್ರೇರೇಪಿಸುವ ಕಾರ್ಯವಾಗಲಿ

7-SIRSI-4 FOREST
Published on

ಶಿರಸಿ: ಮಕ್ಕಳಿಗೆ ಪರಿಸರದ ಜಾಗೃತಿ ಮೂಡಿಸಿ, ಅವರ ಬದುಕಿನ ಉದ್ದಕ್ಕೂ ಅದನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಕಾರ್ಯ ಭವಿಷ್ಯದ ಹಿನ್ನಲೆಯಲ್ಲಿ ಅನಿವಾರ್ಯ ಹಾಗೂ ಅಗತ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗವತ ಹೇಳಿದರು.
ಶನಿವಾರ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದ ಆವಾರದಿಂದ ಆರಂಭಗೊಂಡ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಪರಿಸರದ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆ ಕಾರ್ಯವನ್ನು ಸಾಂಘಿಕವಾಗಿ ನಡೆಸುತ್ತಿದ್ದೇವೆ. ಶಿಕ್ಷಕರು ಜಾಗೃತಿ ಮೂಡಿಸಿದರೆ ಮಕ್ಕಳಿಗೆ ತಲುಪಿ ನಾಡಿನ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತದೆ. ಇಂತಹ ಸಪ್ತಾಹಗಳು ಯುವ ಮನಸ್ಸಿನಲ್ಲಿ ಕಟ್ಟಬೇಕಾದ, ಬೆಳಸಬೇಕಾದ ಪರಿಸರದ ಜೀವಿಗಳ ಕುರಿತು ಕಾಳಜಿ ಬೆಳೆಸಲು ಸಾಧ್ಯವಿದೆ ಎಂದರು.
ಅರಣ್ಯ ಮಹಾವಿದ್ಯಾಲಯದ ಡೀನ್ ಆರ್. ವಾಸುದೇವ ಮಾತನಾಡಿ, ನಮ್ಮಲ್ಲಿ 40 ಜಾತಿಯ ಕಪ್ಪೆಗಳ ಸಂತತಿಗಳು ಇಲ್ಲ. ರಾಂ ಪತ್ರೆ ಜಡ್ಡಿಯ ಸಂರಕ್ಷಣೆಯ ಕಾರ್ಯ ಆಗುತ್ತಿದೆ. ಇದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಇಡೀ ದೇಶದ ಜನರ ಕರ್ತವ್ಯ ಎಂದ ಅವರು, ಜೀವಿಯ ಆಹಾರ ಸರಪಳಿ ಕಳಚಿದರೆ ಮನುಷ್ಯನಿಗೆ ಪೆಟ್ಟಾಗುತ್ತದೆ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಮಾತನಾಡಿ, ಹುಲಿಗಳ ಸಂತತಿ ನಮ್ಮ ವೃತ್ತದಲ್ಲಿ ಹೆಚ್ಚಾಗಿದೆ. ಮುಂಡಿಗೆಕೆರೆ ಪಕ್ಷಿಧಾಮ ಸಂರಕ್ಷಿತ ವಲಯ ಎಂದು ಘೋಷಿತವಾಗಿದೆ. ಪರಿಸರದ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಕೆ.ಜಿ. ಪ್ರಕಾಶ, ಶಿವರಾಮ, ಮಂಜುನಾಥ ಹೆಬ್ಬಾರ, ಉಷಾ ಕಬ್ಬೇರ್, ಬೋಚಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net