

ಶಿರಸಿ: ನಗರದ ಟಿಎಸ್ಎಸ್ಗೆ ಈ ಹಿಂದೆ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು ವಿಶೇಷಾಧಿಕಾರಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ಬೆಳಗಾವಿ ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರು ರದ್ದು ಮಾಡಿ ಈಗಿನ ಆಡಳಿತ ಮಂಡಳಿ ಊರ್ಜಿತದಲ್ಲಿರಿಸಿ ಆದೇಶಿಸಿದ್ದಾರೆ.
ಬೆಳಗಾವಿ ಜಂಟಿ ನಿಬಂಧಕರು ಗುರುವಾರ ಕೊನೆಯದಾಗಿ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದ್ದು, ಗೋಪಾಲಕೃಷ್ಣ ವೈದ್ಯ ನೇತೃತ್ವದ ಈಗಿನ ಆಡಳಿತ ಮಂಡಳಿಯು ದಾಖಲು ಮಾಡಿದ್ದ ಮೇಲ್ಮನವಿ ಪುರಸ್ಕರಿಸಿದ್ದಾರೆ.
ಈ ಹಿಂದೆ ಜಿಲ್ಲಾ ಉಪನಿಬಂಧಕರು ಟಿಎಸ್ಎಸ್ ಆಡಳಿತ ಮಂಡಳಿಯ ಚುನಾವಣೆ ಅಕ್ರಮವಾಗಿದ್ದು, ಆರು ತಿಂಗಳೊಳಗೆ ಪುನಃ ಚುನಾವಣೆ ನಡೆಸುವಂತೆ ಆದೇಶಿಸಿ ಸಂಸ್ಥೆಗೆ ವಿಶೇಷಾಧಿಕಾರಿಯನ್ನು ನೇಮಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದ ಈಗಿನ ಆಡಳಿತ ಮಂಡಳಿಯು ಬೆಳಗಾವಿ ಪ್ರಾಂತ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರಲ್ಲಿ ಮೇಲ್ಮನವಿ ದಾಖಲಿಸಿಕೊಂಡಿತ್ತು. ಈ ವೇಳೆ ಜಂಟಿ ನಿಬಂಧಕರು ಮುಂದಿನ ಆದೇಶದವರೆಗೆ ವಿಶೇಷಾಧಿಕಾರಿ ನೇಮಕಕ್ಕೆ ತಾತ್ಕಾಲಿಕ ತಡೆ ನೀಡಿದ್ದರು. ಇದರ ಜತೆಗೆ ಧಾರವಾಡ ಹೈಕೋರ್ಟ್ ದ್ವಿ ಸದಸ್ಯ ಪೀಠವು ನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅಪೀಲ್ ಪ್ರಕರಣದಲ್ಲಿ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ನೀಡಿದ್ದ ತಾತ್ಕಾಲಿಕ ತಡೆಯಾಜ್ಞೆ ಎತ್ತಿಹಿಡಿದಿತ್ತು.