ಶಿರಸಿ ನಗರಸಭೆ ಆಯವ್ಯಯ ಮಂಡನೆ

5sirsi1
Published on

ಶಿರಸಿ: ಅಮೃತ ನಿರ್ಮಲ ಯೋಜನೆಯಲ್ಲಿ ಶಿರಸಿ ನಗರಕ್ಕೆ ನೀರು ಪೂರೈಸುವ ಸಲುವಾಗಿ ನಗರದ ಎಲ್ಲೆಡೆ ಅವೈಜ್ಞಾನಿಕವಾಗಿ ರಸ್ತೆ ಅಗೆದು ಪೈಪ್ ಅಳವಡಿಸಲಾಗುತ್ತಿದೆ. ಈ ಕಾಮಗಾರಿಯ ಗುತ್ತಿಗೆದಾರರು ನಗರಸಭೆಗೆ ಕನಿಷ್ಠ ಮಾಹಿತಿಯನ್ನೂ ನೀಡುತ್ತಿಲ್ಲ ಎಂಬ ಆರೋಪ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವ್ಯಕ್ತಗೊಂಡಿತು.

ಸದಸ್ಯ ಫ್ರಾನ್ಸಿಸ್ ನರೋನಾ, ಶ್ರೀಕಾಂತ ತಾರಿಬಾಗಿಲು ಈ ವಿಷಯ ಪ್ರಸ್ತಾಪಿಸಿ, 65 ಕೋಟಿ ರೂ. ಮೌಲ್ಯದ ಈ ಬೃಹತ್ ಯೋಜನೆಯನ್ನು ಜಲ ಮಂಡಳಿ ಅನುಷ್ಠಾನಗೊಳಿಸುತ್ತಿದೆ. ಈ ಕಾಮಗಾರಿ ಭಾಗವಾಗಿ ನಗರದ 27 ವಾರ್ಡ್‌ಗಳಲ್ಲಿ ರಸ್ತೆ ಅಗೆದು ಪೈಪ್ ಹಾಕಲಾಗುತ್ತಿದೆ. ಆದರೆ, ರಸ್ತೆ ಅಗೆದ ಮಣ್ಣನ್ನು ಸಮರ್ಪಕವಾಗಿ ಮುಚ್ಚುತ್ತಿಲ್ಲ. ಇದರಿಂದಾಗಿ ಬೈಕ್ ಸವಾರರು ಬೀಳುವ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು. ನಗರ ಪ್ರದೇಶದಲ್ಲಿ ಈಗಾಗಲೇ ಕುಡ್ಸೆಂಪ್ ಯೋಜನೆಯಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಬಹುತೇಕ ಕಡೆ ಈ ಪೈಪ್ ಲೈನ್ ಉತ್ತಮವಾಗಿದ್ದರೂ ಹೊಸ ಕಾಮಗಾರಿಗಾಗಿ ಕಿತ್ತು ಹಾಕಲಾಗುತ್ತಿದೆ. ಪೈಪ್‌ಲೈನ್ ಸಮರ್ಪಕವಾಗಿ ಮುಚ್ಚಿದ ಬಳಿಕ ಆ ಜಾಗಕ್ಕೆ ನೀರು ಹಾಕಿ ಗಟ್ಟಿಗೊಳಿಸುವ ಕಾರ್ಯವನ್ನು ಗುತ್ತಿಗೆದಾರರು ಮಾಡುತ್ತಿಲ್ಲ. ಹೊಸ ಪೈಪ್ ಲೈನ್ ಅಳವಡಿಸುವಾಗ ಸ್ಥಳೀಯ ಜನಪ್ರತಿನಿಧಿಗಳನ್ನಾಗಲೀ, ನಗರಸಭೆ ಅಧಿಕಾರಿಗಳನ್ನಾಗಲೀ ಸಂಪರ್ಕಿಸುತ್ತಿಲ್ಲ. ಯೋಜನೆಯ ಡಿಪಿಆರ್ ಸಹ ನಗರಸಭೆಗೆ ನೀಡಿಲ್ಲ. ನಾವೇ ಅವರನ್ನು ಸಂಪರ್ಕಿಸಿ ಮಾರ್ಗದರ್ಶನ ನೀಡೋಣವೆಂದರೆ ಗುತ್ತಿಗೆದಾರರು ಶಿರಸಿಯಲ್ಲಿ ಕಚೇರಿ ಸಹ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರಸಭೆಗೆ ಜಲ ಮಂಡಳಿ ಮಾಹಿತಿ ನೀಡದಿದ್ದರೂ ನಗರದ ಹಿತದೃಷ್ಟಿಯಿಂದ ನಾವು ಸಹಕಾರ ನೀಡೋಣ. ನಗರದ ಜನತೆಗೆ ಈ ಯೋಜನೆ ಮೂಲಕ ಸಮರ್ಪಕವಾಗಿ ನೀರು ಲಭ್ಯವಾಗುವಂತೆ ಮಾಡೋಣ. ಆದರೆ, ಕಾಮಗಾರಿ ಅನುಷ್ಠಾನದಿಂದ ಹಾಳಾಗುತ್ತಿರುವ ರಸ್ತೆ ರಿಪೇರಿ, ಆಗುತ್ತಿರುವ ತೊಂದರೆ ಬಗೆಹರಿಸಿಕೊಳ್ಳಲು ಅವರೊಂದಿಗೆ ಚರ್ಚೆ ನಡೆಸೋಣ ಎಂದರು.

ಸದಸ್ಯ ದಯಾ ನಾಯ್ಕ ವಿಷಯ ಪ್ರಸ್ತಾಪಿಸಿ, ನಗರದ ಕಸ್ತೂರಬಾ ನಗರದ ಸರ್ವೇ ನಂ.137ರಲ್ಲಿ ಮನೆಗಳ ನಿರ್ಮಾಣದ ಕುರಿತಂತೆ 7.35 ಎಕರೆ ಪ್ರದೇಶದಲ್ಲಿ ನಕ್ಷೆಯ ವಿನ್ಯಾಸ ಪರಿಷ್ಕರಿಸಲು 2024ರ ಸೆ.3ರ ಸಾಮಾನ್ಯ ಸಭೆಯಲ್ಲಿ ಠರಾವು ಅಂಗೀಕರಿಸಲಾಗಿತ್ತು. ಈ ಕುರಿತಂತೆ ನಗರ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದು ನಕ್ಷೆಯಲ್ಲಿ ಸೂಕ್ತ ರಸ್ತೆಯನ್ನು ಕಲ್ಪಿಸಿ ನಕ್ಷೆಯ ವಿನ್ಯಾಸ ಬದಲಿಸುವಂತೆ ಆಗ್ರಹಿಸಲಾಗಿತ್ತು. ಆದರೆ, ನಗರಸಭೆ ಈಗ ಮತ್ತೆ ಈ ವಿಷಯವನ್ನು ಚರ್ಚೆಗೆ ಪರಿಗಣಿಸಿದೆ. ಇದು ಗೊಂದಲ ನಿರ್ಮಾಣಕ್ಕೆ ಕಾರಣವಾಗುತ್ತಿದೆ ಎಂದರು. ಈ ವೇಳೆ ಮಾತನಾಡಿದ ಸದಸ್ಯ ಶ್ರೀಕಾಂತ ತಾರಿಬಾಗಿಲು, ಒಂದು ವಿಷಯಕ್ಕೆ ಸಂಬಂಧಿಸಿ ಪದೇಪದೆ ಠರಾವು ಮಾಡುವುದು ಸರಿಯಲ್ಲ, ಇದು ಗೊಂದಲಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಚರ್ಚೆ ಕೈ ಬಿಟ್ಟು ಚರ್ಚೆ ನಡೆಸಿ ಸೂಕ್ತ ನಿರ್ಧಾಕ್ಕೆ ಬಂದ ಬಳಿಕ ಠರಾವು ಮಾಡುವುದು ಉತ್ತಮ ಎಂದರು.

ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net