

ಶಿರಸಿ: ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಅರಣ್ಯವಾಸಿಗಳಿಂದ 33 ವರ್ಷ ಹೋರಾಟ- ದಶಲಕ್ಷ ಗಿಡ ನೆಡುವ ಅಭಿಯಾನದ ವನಮಹೋತ್ಸವವನ್ನು ಜಿಲ್ಲಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ನಗರದ ವೇದಿಕೆ ಕಾರ್ಯಾಲಯದಲ್ಲಿ ಸೋಮವಾರ ಅಭಿಯಾನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಮೇಲೆ ಅವಲಂಬಿತ ಅರಣ್ಯವಾಸಿಗಳು ಜಿಲ್ಲಾದ್ಯಂತ ಗಿಡ ನೆಟ್ಟು, ಪರಿಸರ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಭೌಗೋಳಿಕವಾಗಿ 10,571 ಚದರ ಕೀ.ಮೀ. ಪ್ರದೇಶ ಹೊಂದಿದೆ. ಅವುಗಳಲ್ಲಿ 8,500 ಚದರ ಕೀ.ಮೀ. ಅರಣ್ಯ ಪ್ರದೇಶವಾಗಿದೆ. ಜಿಲ್ಲೆಯ ಜನಸಂಖ್ಯೆಯ ಸಾಂದ್ರತೆಯ ಪ್ರಮಾಣ ಪ್ರತಿ ಚದರ ಕಿ.ಮೀಗೆ 202 ಜನ ಇದೆ. ಅರಣ್ಯ ಸಾಂದ್ರತೆಯ ಪ್ರದೇಶವು ಜನಸಂಖ್ಯೆಯ ಸಾಂದ್ರತೆಗಿಂತ 10 ಪಟ್ಟು ಹೆಚ್ಚಿದ್ದರೂ ನೈಸರ್ಗಿಕ ಅರಣ್ಯ ಕ್ಷೀಣಿಸುತ್ತಿದೆ. ಹೀಗಾಗಿ, ಪ್ರತಿ ಕುಟುಂಬವೂ ಗಿಡ ನೆಟ್ಟು ಜಿಲ್ಲೆಯ ಪರಿಸರ ವ್ಯವಸ್ಥೆ ಉಳಿಸಿಕೊಳ್ಳಬೇಕಿದೆ ಎಂದರು.
ವೇದಿಕೆಯ ಯಲ್ಲಾಪುರ ತಾಲೂಕ ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ಮುಂಡಗೋಡ ತಾಲೂಕಾಧ್ಯಕ್ಷ ಶಿವಾನಂದ ಜೋಗಿ, ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ರಾಜು ನರೇಬೈಲ್, ದುಗ್ಗು ಮರಾಠಿ, ನೂರ್ ಅಹಮ್ಮದ್, ಗಣೇಶ ಧಾಕು ಮರಾಠಿ ಇದ್ದರು.