ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ

13-SDP-MEETING
Published on

ಶಿರಸಿ: ಶಿರಸಿ ತಾಲೂಕು ಪಂಚಾಯಿತಿ 2025-26ನೇ ಸಾಲಿಗೆ 141.34 ಕೋ.ರೂ. ಬಜೆಟ್ ಮಂಡಿಸಿದೆ. ಇಲ್ಲಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ತಾಪಂ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ ಬಜೆಟ್ ಮಂಡಿಸಿದರು.

ಬಳಿಕ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಬಜೆಟ್ ಕಳೆದ ಬಜೆಟ್​ಗಿಂತ 23.38 ಕೋ.ರೂ.ಗಳಷ್ಟು ಹೆಚ್ಚಾದಂತಾಗಿದೆ. ಪ್ರಾಥಮಿಕ ಮತ್ತು ಪೌಢ ಶಿಕ್ಷಣಕ್ಕಾಗಿ 118.74 ಕೋ. ರೂ., ಆರೋಗ್ಯ ಇಲಾಖೆಗೆ 19.93 ಲಕ್ಷ ರೂ. ಒದಗಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ 21 ಲಕ್ಷ ರೂ.ಗಳಷ್ಟು ಕಡಿಮೆ ಆಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 1.75 ಕೋ.ರೂ. ಒದಗಿಸಲಾಗಿದ್ದು, ಇದು ಕಳೆದ ವರ್ಷಕ್ಕಿಂತ 43 ಲಕ್ಷ ರೂ.ಗಳ ಕಡಿಮೆ ಅನುದಾನವಾಗಿದೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 16.13 ಲಕ್ಷ ರೂ. ಒದಗಿಸಲಾಗಿದ್ದು, ಕಳೆದ ಸಾಲಿಗಿಂತ 2.45 ಲಕ್ಷ ಹೆಚ್ಚಿನ ಅನುದಾನ ನೀಡಿದಂತಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ 1.87 ಕೋ.ರೂ., ಕೃಷಿ ಇಲಾಖೆಗೆ 31 ಲಕ್ಷ ರೂ., ಪಶು ಸಂಗೋಪನಾ ಇಲಾಖೆಗೆ 2.65 ಕೋ. ರೂ., ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯಕ್ಕಾಗಿ 6.83 ಕೋ.ರೂ. ಒದಗಿಸಲಾಗುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿ, ಶಿರಸಿ ತಾಲೂಕಿನಲ್ಲಿ ತುರ್ತು ರಿಪೇರಿ ಮಾಡಬೇಕಿರುವ 87 ಶಾಲಾ ಕೊಠಡಿಗಳನ್ನು ಗುರುತಿಸಿದ್ದೇವೆ. ಈ ಕುರಿತಂತೆ ಈಗಾಗಲೇ ವರದಿಯನ್ನು ತಹಸೀಲ್ದಾರರ ಕಚೇರಿ, ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದ್ದು, ಶೀಘ್ರ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಆರೋಗ್ಯ ಇಲಾಖೆಯ ಡಾ. ಸೌಮ್ಯ ಮಾಹಿತಿ ನೀಡಿ, ಈ ವೇಳೆ ಡೆಂಘ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದುದರಿಂದ ನಾವು ಕಾಳಜಿ ವಹಿಸುತ್ತಿದ್ದೇವೆ. ಪ್ರತಿ ಹಳ್ಳಿಯಲ್ಲೂ ಡೆಂಘ ಜ್ವರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಮಾಹಿತಿ, ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಇದುವರೆಗೆ ಶಂಕಿತ 80 ಜನರ ರಕ್ತ ಪರೀಕ್ಷೆ ನಡೆಸಿದ್ದು, ಒಂದು ಪ್ರಕರಣದಲ್ಲಿ ಮಾತ್ರ ಡೆಂಘ ಇರುವುದು ಧೃಢಪಟ್ಟಿದೆ. ಆದರೆ ಅವರು ಮಂಗಳೂರು ನಿವಾಸಿಯಾಗಿದ್ದು, ಈಗ ಅಲ್ಲಿಗೇ ತೆರಳಿದ್ದಾರೆ. ಮಂಗನ ಕಾಯಿಲೆ ಕುರಿತಂತೆ ಶಂಕಿತ 160 ಜನರ ಪರೀಕ್ಷೆ ನಡೆಸಿದ್ದು, ಯಾವುದೂ ದೃಢಪಟ್ಟಿಲ್ಲ. ಲಸಿಕಾ ಕಾರ್ಯಕ್ರಮದಲ್ಲಿ ಶೇ. 100ಕ್ಕಿಂತ ಹೆಚ್ಚಿನ ಸಾಧನೆ ಮಾಡಿದ್ದೇವೆ. ನಾಯಿ ಕಡಿತದ ಇಂಜೆಕ್ಷನ್ ಸದ್ಯ ಕೊರತೆ ಇದೆ. ಹೀಗಾಗಿ, ಈ ಇಂಜೆಕ್ಷನ್​ಗೆ ಬೇಡಿಕೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಪೂರೈಕೆ ಆಗುವ ನಿರೀಕ್ಷೆ ಇದೆ ಎಂದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಗಣೇಶ ಹೆಗಡೆ ಮಾಹಿತಿ ನೀಡಿ, ಶಿರಸಿ ತಾಲೂಕಿನಲ್ಲಿ ಕಳೆದ ವರ್ಷ 5,200 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿತ್ತು. ಈಗಾಗಲೇ ತಾಲೂಕಿನ ಎರಡು ಹಳ್ಳಿಗಳಲ್ಲಿ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಸಸ್ಯ ಸಂರಕ್ಷಣಾ ಔಷಧಗಳ ಸಿಂಪಡಣೆ 78 ಲಕ್ಷ ರೂ. ಅನುದಾನ ಈಗಾಗಲೇ ಬಂದಿದೆ. ರೈತರು ಸಿಂಪಡಿಸುವ ಬೋಡೋ ಅಥವಾ ಟ್ರಾಪಿಕೊನೊಜೊಲ್ ಔಷಧಗಳಿಗೆ ಶೇ. 30ರಷ್ಟು ಸಹಾಯಧನ ನೀಡಲಾಗುತ್ತಿದೆ. ಇದರಿಂದಾಗಿ ರೈತಗೆ ಪ್ರತಿ ಎಕರೆಗೆ 600 ರೂ. ಸಹಾಯಧನ ಲಭಿಸಲಿದೆ ಎಂದರು. ತಾಪಂ ಲೆಕ್ಕಾಧಿಕಾರಿ ಸೀತಾರಾಮ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net