

ಶಿರಸಿ: ತಾಲೂಕಿನ ಗ್ರಾಮೀಣ ಭಾಗವೀಗ ಗಡಗಡ ಎನ್ನತೊಡಗಿದೆ. ಮೈ ಕೊರೆಯುವ ಚಳಿ ಕಳೆದ ಕೆಲ ದಿನಗಳಿಂದ ಆರಂಭಗೊಂಡಿದ್ದು, ಶುಕ್ರವಾರ ರಾತ್ರಿ ತಾಪಮಾನ 15 ಡಿಗ್ರಿ ಸೆಲ್ಶಿಯಸ್ಗೆ ಇಳಿಕೆಯಾಗಿದೆ.
ಸಂಜೆ 7 ಗಂಟೆಯ ಬಳಿಕ ಬೈಕ್ ಮೂಲಕ ಸಾಗುವ ಪ್ರಯಾಣಿಕರಿಗೆ ಚಳಿಯಿಂದಾಗಿ ಕೈ ಕಾಲು ಹಿಡಿದುಕೊಂಡ ಅನುಭವ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಈ ವೇಳೆ ತಾಪಮಾನ ಗಣನೀಯವಾಗಿ ಇಳಿಕೆ ಆಗುತ್ತಿದೆ. ಅಡಕೆಯ ಕಟಾವಿನ ಕಾರ್ಯ ಈಗ ಬಹುತೇಕ ಕಡೆ ಪೂರ್ಣಗೊಂಡು ಚಾಲಿ ಅಡಕೆ ಸಿದ್ಧಪಡಿಸುವವರು ಮನೆಯ ಅಂಗಳದಲ್ಲಿ, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಒಣ ಹಾಕಿತ್ತಿದ್ದಾರೆ. ರಾತ್ರಿ ವೇಳೆ ಈ ಅಡಕೆ ಕಾಯುವ ಸಲುವಾಗಿ ಕಂಬಳಿ ಹೊದ್ದು ಕುಳಿತರೂ ಚಳಿಯ ಪ್ರಮಾಣ ಜಾಸ್ತಿಯಾಗಿರುವುದರಿಂದ ಬೆಂಕಿ ಮಾಡಿಕೊಂಡು ಕಾಯುವಂತಾಗಿದೆ.
ಶಿರಸಿಯ ವೈದ್ಯ ಡಾ. ರವಿಕಿರಣ ಪಟವರ್ಧನ ಕಳೆದ ಕೆಲ ವರ್ಷಗಳಿಂದ ನಗರದ ತಾಪಮಾನವನ್ನು ಹವ್ಯಾಸಕ್ಕಾಗಿ ದಾಖಲಿಸುತ್ತಿದ್ದಾರೆ. ಅವರ ಅಭಿಪ್ರಾಯದಂತೆ ಮಲೆನಾಡಿನ ತಾಲೂಕಾಗಿದ್ದರೂ ಶಿರಸಿಯಲ್ಲಿ ವಾತಾವರಣದಲ್ಲಿ ಗಣನೀಯ ವ್ಯತ್ಯಾಸವಾಗುತ್ತಿದೆ.
ಚಳಿಗಾಲದ ದಿನಗಳಲ್ಲಿ ರಾತ್ರಿಯ ವೇಳೆ ತಾಪಮಾನ 15 ಡಿಗ್ರಿ ಶೆಲ್ಶಿಯಸ್ಗೆ ಕುಸಿಯುತ್ತಿದ್ದರೆ ಬೇಸಿಗೆಯ ದಿನಗಳಲ್ಲಿ ಹಗಲಿನ ತಾಪಮಾನ 38 ಡಿಗ್ರೀ ಸೆಲ್ಶಿಯಸ್ವರೆಗೂ ಏರುತ್ತಿದೆ. ಇತ್ತೀಚಿನ ವರ್ಷಗಳವರೆಗೂ ತಾಪಮಾನದಲ್ಲಿ ಇಷ್ಟೊಂದು ಬದಲಾವಣೆ ಆಗುತ್ತಿರಲಿಲ್ಲ. ಚಳಿಗಾಲದ ಈ ದಿನಗಳಲ್ಲಿ ಹಗಲಿನ ಹೊತ್ತಿನಲ್ಲೂ ಸಹ ತಾಪಮಾನ ಕಡಿಮೆ ದಾಖಲಾಗುತ್ತಿದೆ ಎನ್ನುತ್ತಾರೆ.
ಗ್ರಾಮೀಣ ಪ್ರದೇಶದ ಹಲವೆಡೆ ಬೆಳಗಿನ ವೇಳೆ ದಟ್ಟನೆಯ ಮಂಜೂ ಸಹ ಬೀಳುತ್ತಿದೆ. ವಾಹನಗಳ ಚಾಲಕರಿಗೆ ದಾರಿ ಕಾಣದ ಸ್ಥಿತಿ ಸಹ ಉಂಟಾಗಿ ಎಚ್ಚರಿಕೆಯಿಂದ ಚಾಲನೆ ಮಾಡುವಂತಾಗಿದೆ.