

ಶಿರಸಿ: ವಿದ್ಯಾರ್ಥಿಗಳು ಗರ್ವ ಮತ್ತು ಅಹಂಕಾರ ಹೊಂದಿರಬಾರದು. ಇದರಿಂದ ಅವರ ಜ್ಞಾನದ ಬೆಳವಣಿಗೆಗೆ ತೊಡಕಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಇಸಳೂರು ಶ್ರೀನಿಕೇತನ ಶಾಲೆಯಲ್ಲಿ ಇತ್ತೀಚೆಗೆ ಸಾಂಸ್ಕೃತಿಕೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡದ ರಾಮಕೃಷ್ಣಾಶ್ರಮದ ಶ್ರೀ ವಿಜಯಾನಂದ ಸರಸ್ವತೀ ಮಹಾಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಧರ್ಮ, ಸಂಸ್ಕೃತಿ ಮತ್ತು ತ್ಯಾಗ ಮನೋಭಾವ ಉಳ್ಳವರಾಗಿರಬೇಕು ಎಂದರು.
ಖ್ಯಾತ ವಾಗ್ಮಿ ಡಾ. ಕೆ.ಪಿ. ಪುತ್ತೂರಾಯ ಮಾತನಾಡಿ, ಮಕ್ಕಳು ಹಾಗೂ ಪಾಲಕರು ಸಮಯಪ್ರಜ್ಞೆ, ಸಂದರ್ಭ ಪ್ರಜ್ಞೆ ಹಾಗೂ ಸಮಾಜ ಪ್ರಜ್ಞೆ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಉತ್ತಮ ಆರೋಗ್ಯ, ಆಹಾರ ಹಾಗೂ ಶಿಸ್ತು, ಸ್ವಚ್ಛತೆ, ಗುರು-ಹಿರಿಯರಲ್ಲಿ ಗೌರವ ಭಾವ ಹೊಂದಿರಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಾಲೆಯ ಕಾರ್ಯದರ್ಶಿ ಪ್ರೊ. ಕೆ.ಎನ್. ಹೊಸಮನಿ ಸ್ವಾಗತಿಸಿದರು. ಶಾಲೆ ಅಧ್ಯಕ್ಷ ಮೇಜರ್ ರಘುನಂದನ ಹೆಗಡೆ ಅತಿಥಿಗಳ ಪರಿಚಯ ಮಾಡಿದರು. ಪ್ರಾಂಶುಪಾಲ ವಸಂತ ಭಟ್ಟ ಶಾಲೆಯ ವರದಿ ವಾಚನ ಮಾಡಿದರು. ವಸುಧಾ ಹೆಗಡೆ ಕ್ಲಬ್ ಚಟುವಟಿಕೆಗಳ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಚಟುವಟಿಕೆಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಿವರಾಮ ಭಟ್ಟ, ಸ್ವರ್ಣವಲ್ಲೀ ಮಹಾಸಂಸ್ಥಾನದ ಅಧ್ಯಕ್ಷ ವಿ.ಎಂ. ಹೆಗಡೆ ಬೊಮ್ನಳ್ಳಿ, ಪ್ರಮುಖರಾದ ಡಾ. ಎಂ.ಜಿ. ಹೆಗಡೆ, ಅಶ್ವಿನಿ ಜಿ. ಹೆಗಡೆ, ಶ್ರೀಲತಾ ಶಾನುಭಾಗ ಇತರರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃಕ ಕಾರ್ಯಕ್ರಮಗಳು ನೆರವೇರಿದವು.