ಇಂದ್ರಿಯ ನಿಯಂತ್ರಣದಿಂದ ಶಾಶ್ವತ ನೆಮ್ಮದಿ

27-SWARNAWALLI
Published on

ಶಿರಸಿ: ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಂತ್ರಣದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸಾತ್ವಿಕವಾದ ನೆಮ್ಮದಿ ಲಭಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಚಾತುರ್ವಸ್ಯ ವ್ರತಾಚರಣೆ ಅಂಗವಾಗಿ ಗುಂದ ಸೀಮೆ, ಛಾಪಖಂಡ ಭಾಗಿಯ ಶಿಷ್ಯರು ಶನಿವಾರ ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಅವರು ಮಾತನಾಡಿದರು.

ಪ್ರತಿಯೊಂದಕ್ಕೂ ನಮ್ಮ ಮನಸು ಮುಖ್ಯ ಕಾರಣ. ಅದನ್ನು ನಿಗ್ರಹಿಸಿದರೆ ಎಲ್ಲವನ್ನೂ ನಿಗ್ರಹಿಸುವ ಸಾಮರ್ಥ್ಯ ನಮ್ಮಲ್ಲಿ ಬರುತ್ತದೆ. ನಮ್ಮನ್ನು ಧರ್ವಚರಣೆಯಲ್ಲಿ ತೊಡಗಿಸುತ್ತದೆ ಎಂದರು.

ಮಠಕ್ಕೆ ಬಂದು ಗುರುಗಳ ದರ್ಶನ ಮಾಡುವುದು ಮತ್ತು ಮಾರ್ಗದರ್ಶನ ಪಡೆಯುವುದು ನಮ್ಮ ಜೀವನದಲ್ಲಿ ತಪಸ್ಸಿನ ಸಂದೇಶವನ್ನು ಪಡೆಯಲು, ತಪಸ್ಸಿನ ಮಾರ್ಗದಲ್ಲಿ ಹೋಗುವುದನ್ನು ರೂಢಿಸಿಕೊಳ್ಳಬಕು. ಇಂದ್ರಿಯಗಳ ಆಕರ್ಷಣೆ ತಡೆಗಟ್ಟುವಲ್ಲಿ ಪ್ರಯತ್ನ ಬೇಕು. ಅದನ್ನು ತಡೆಗಟ್ಟಿದರೆ ತಪಸ್ಸಾಗುತ್ತದೆ, ಜೀವನದ ಯಶಸ್ಸಿಗೂ ಕಾರಣವಾಗುತ್ತದೆ. ಇಂದ್ರಿಯಗಳನ್ನು ಹರಿಯಲು ಬಿಟ್ಟರೆ ಅದು ನರಕ. ಮಾನಸಿಕ, ದೈಹಿಕ ಆರೋಗ್ಯ ಕೆಡುತ್ತದೆ. ಇಂದ್ರಿಯಗಳನ್ನು ಹರಿ ಬಿಡುವುದರಿಂದ ಪಾಪಗಳು ಹೆಚ್ಚುತ್ತವೆ. ಇಂದ್ರಿಯಗಳ ಆಕರ್ಷಣೆಯಿಂದ ಅನೇಕ ತಪ್ಪು ಕಾರ್ಯಗಳು ಆಗುತ್ತವೆ. ಅನೇಕ ದುಷ್ಟ ಕೆಲಸಗಳಿಗೂ ಇದೆ ಕಾರಣವಾಗುತ್ತದೆ. ಹೀಗಾಗಿ, ಇಂದ್ರಿಯ ನಿಗ್ರಹ ಮಾಡಿಕೊಳ್ಳುವುದರ ಮೂಲಕ ತಪ್ಪಸ್ಸನ್ನು ಸಿದ್ಧಿಸಿಕೊಳ್ಳಬಹುದು ಎಂದರು.

ಇಂದ್ರಿಯಗಳ ನಿಗ್ರಹ ಸಂಪಾದಿಸಿಕೊಳ್ಳಲು ಬೆಳಗ್ಗೆ, ಮಧ್ಯಾಹ್ನ, ಸಂಜೆ ಸಕಾಲದಲ್ಲಿ ಅನುಷ್ಠಾನಕ್ಕೆ ತೊಡಗುವುದು ಒಳ್ಳೆಯ ಸಾಧನ. ಸಂಧ್ಯಾಕಾಲದಲ್ಲಿ ಉತ್ತಮ ಆಚರಣೆ ಇಟ್ಟುಕೊಳ್ಳಬೇಕು, ಅನುಷ್ಠಾನಕ್ಕೆ ತೊಡಗಬೇಕು, ಸಂಧ್ಯಾಕಾಲದಲ್ಲಿ ಜಪ, ಧ್ಯಾನ, ಪೂಜೆ ಮಾಡಿದರೆ ಮನಸು ಬೇಗ ಹಿಡಿತಕ್ಕೆ ಸಿಕ್ಕುತ್ತದೆ. ಮನಸನ್ನು ನಿಗ್ರಹ ಮಾಡಲು ಅದು ಉತ್ತಮ ಕಾಲ. ಆದ್ದರಿಂದ ಪ್ರತಿಯೊಬ್ಬರೂ ಈ ಕಾಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಶಿಸಿದರು. ಈ ವೇಳೆ ಕಿರಿಯ ಶ್ರೀಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೀಮಾ ಅಧ್ಯಕ್ಷ ದತ್ತಾತ್ರೇಯ ಹೆಗಡೆ ತಮ್ಮಣಗಿ, ಶಿವಾನಂದ ಪಾಟೀಲ, ಮಾತೃಮಂಡಳಿಯ ಪ್ರಮುಖರಾದ ಸೀತಾ ದಾನಗೇರಿ, ವಿಶಾಲಾಕ್ಷಿ ಭಟ್ ಪಟೋಳಿ ಇತರರು ಇದ್ದರು.

ಮನಸನ್ನು ನಿಗ್ರಹಿಸಿದರೆ ಉಳಿದೆಲ್ಲ ಇಂದ್ರಿಯಗಳು ನಿಗ್ರಹಕ್ಕೆ ಬರುತ್ತದೆ. ಇಂದಿನ ಕಾಲದಲ್ಲಿ ಅನೇಕ ಮನೆಗಳಲ್ಲಿ ಸಂಧ್ಯಾವಂದನೆ ದೇವರ ಪೂಜೆಗಳನ್ನು ಬಿಡುತ್ತಿದ್ದಾರೆ, ಅದು ಸರಿಯಲ್ಲ.| ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net